ಲಕ್ನೋದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದ್ದು, ಬನ್ ತಿಂದು ಹಣ ನೀಡದೆ ಹೋಗಲು ಯತ್ನಿಸಿದ ವ್ಯಕ್ತಿಯೊಬ್ಬ ತಾನು ಐಪಿಎಸ್ ಅಧಿಕಾರಿ ಎಂದು ಹೇಳಿ ಪೊಲೀಸರನ್ನೇ ಬೆದರಿಸಲು ಮುಂದಾದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವರದಿಗಳ ಪ್ರಕಾರ, ರಸ್ತೆಬದಿಯ ಅಂಗಡಿಯೊಂದರಲ್ಲಿ ಆರೋಪಿಯು ಬನ್ ತಿಂದು ಸುಮಾರು 40 ರೂಪಾಯಿ ಬಿಲ್ ಪಾವತಿಸದೆ ಅಲ್ಲಿಂದ ತೆರಳಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಅಂಗಡಿ ಮಾಲೀಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಂತೆ, ಆ ವ್ಯಕ್ತಿ ತಾನು ನೋಯ್ಡಾದಲ್ಲಿ ಕೆಲಸ ಮಾಡುತ್ತಿರುವ ಐಪಿಎಸ್ ಅಧಿಕಾರಿ ಎಂದು ಹೇಳಿ ಪೊಲೀಸರ ಮೇಲೆಯೇ ಗದರಲು ಆರಂಭಿಸಿದ್ದಾನೆ. “ನನಗೆ ಸೆಲ್ಯೂಟ್ ಮಾಡುವುದು ಬಿಟ್ಟು ಪ್ರಶ್ನೆ ಮಾಡ್ತೀರಾ?” ಎಂದು ಕರ್ತವ್ಯದಲ್ಲಿದ್ದ ಪೊಲೀಸರನ್ನೇ ಪ್ರಶ್ನಿಸಿದ್ದಾನೆ.

ಇದಕ್ಕೂ ಮೀರಿಸಿ, ಕಾನ್‌ಸ್ಟೆಬಲ್‌ಗಳು ಆತನನ್ನು ಸಾಮಾನ್ಯವಾಗಿ “ಅಣ್ಣಾ” ಎಂದು ಕರೆದಾಗ ಕೋಪಗೊಂಡ ಆರೋಪಿಯು, “ಅಣ್ಣಾ ಎಂದು ಕರೆಯಬೇಡಿ, ಸರ್ ಎಂದು ಕರೆ” ಎಂದು ದಬಾಯಿಸಿದ್ದಾನೆ. ತಾನು ಹಿರಿಯ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ವಿಶೇಷ ಗೌರವ ನೀಡುವಂತೆ ಒತ್ತಾಯಿಸಿದ್ದಾನೆ.

ಆದರೆ ಆರೋಪಿಯ ಮಾತಿಗೆ ಮಣಿಯದ ಕಾನ್‌ಸ್ಟೆಬಲ್ ಅತ್ಯಂತ ಸಮಾಧಾನದಿಂದ ಮತ್ತು ಚಾಣಾಕ್ಷತನದಿಂದ ಪ್ರತಿಕ್ರಿಯಿಸಿದ್ದಾರೆ. “ಮೊದಲು ಸಮವಸ್ತ್ರದಲ್ಲಿ ಬನ್ನಿ, ಗುರುತಿನ ಚೀಟಿ ತೋರಿಸಿ, ನಂತರ ನಿಮಗೆ ಸೆಲ್ಯೂಟ್ ಮಾಡುತ್ತೇವೆ” ಎಂದು ಖಡಕ್ ಉತ್ತರ ನೀಡಿದ್ದಾರೆ. ಪೊಲೀಸರ ಈ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ವಿಚಾರಣೆ ವೇಳೆ ಯಾವುದೇ ಗುರುತಿನ ಚೀಟಿ ತೋರಿಸಲು ಆರೋಪಿಗೆ ಸಾಧ್ಯವಾಗದೇ ಹೋದ ಹಿನ್ನೆಲೆ, ಆತ ನಕಲಿ ಅಧಿಕಾರಿ ಎಂಬುದು ಬಹಿರಂಗವಾಗಿದೆ. ಬಳಿಕ ಲಕ್ನೋದ ಮಹಾನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಹಾಗೂ ಸರ್ಕಾರಿ ಸಿಬ್ಬಂದಿಗೆ ತಪ್ಪು ಮಾಹಿತಿ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.

Related News

error: Content is protected !!