ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ಪಾಡ್‌ಕಾಸ್ಟ್ ವಿಡಿಯೋ ಇದೀಗ ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಾಜಿ ಕ್ರಿಕೆಟರೊಬ್ಬರು ಕ್ರಿಕೆಟ್ ಲೋಕದ ಒಳರಾಜಕೀಯ, ಆಯ್ಕೆ ಪ್ರಕ್ರಿಯೆಯಲ್ಲಿನ ಅಕ್ರಮಗಳು ಹಾಗೂ ಆಟಗಾರರ ಮೇಲಿನ ಒತ್ತಡಗಳ ಬಗ್ಗೆ ಮಾಡಿರುವ ಗಂಭೀರ ಆರೋಪಗಳು ಕ್ರೀಡಾಭಿಮಾನಿಗಳನ್ನು ಬೆಚ್ಚಿಬೀಳಿಸಿವೆ.

ncupodcast ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರತಿಭೆಗೆ ಕಡಿಮೆ ಮಹತ್ವ ಸಿಗುತ್ತಿದ್ದು, ಅದರ ಬದಲು ಪ್ರಭಾವ, ಹಣ ಮತ್ತು ಲೈಂಗಿಕ ಆಮಿಷಗಳು ಹೆಚ್ಚಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಲಾಗಿದೆ.

ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮಾಜಿ ಆಟಗಾರರ ಪ್ರಕಾರ, ಕೆಲವು ಹಿರಿಯ ಆಟಗಾರರು ಮತ್ತು ಪ್ರಭಾವಿ ವ್ಯಕ್ತಿಗಳು ಯುವ ಆಟಗಾರರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. “ತಂಡದಲ್ಲಿ ಸ್ಥಾನ ಪಡೆಯಬೇಕೆಂಬ ಒತ್ತಡದಿಂದ ಕೆಲವರು ತಮ್ಮ ಗೆಳತಿಯರನ್ನೇ ಪ್ರಭಾವಿಗಳ ಬಳಿಗೆ ಕಳುಹಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಂತಹ ಘಟನೆಗಳು ರಾಷ್ಟ್ರೀಯ ಮಟ್ಟದಲ್ಲಷ್ಟೇ ಅಲ್ಲ, ಸ್ಥಳೀಯ ಕ್ರಿಕೆಟ್‌ನಲ್ಲಿಯೂ ನಡೆಯುತ್ತಿವೆ,” ಎಂದು ಅವರು ಹೇಳಿದ್ದಾರೆ.

ಇದಷ್ಟೇ ಅಲ್ಲದೆ, ಕೆಲ ಆಟಗಾರರು ತಮ್ಮ ಸಹ ಆಟಗಾರರ ಕುಟುಂಬದವರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳು ಮತ್ತು ಚಿತ್ರಗಳನ್ನು ಕಳುಹಿಸಿ ಕಿರುಕುಳ ನೀಡುತ್ತಾರೆ ಎಂಬ ಆಘಾತಕಾರಿ ಆರೋಪವೂ ಕೇಳಿಬಂದಿದೆ. “ಈ ವಿಚಾರ ತಿಳಿದಿದ್ದರೂ, ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭಯದಿಂದ ಸಂತ್ರಸ್ತ ಆಟಗಾರರು ಮೌನವಾಗಿಯೇ ಇರುತ್ತಾರೆ,” ಎಂದು ಅವರು ಹೇಳಿದ್ದಾರೆ.

ಹಣಕಾಸಿನ ಅಕ್ರಮಗಳ ವಿಚಾರದಲ್ಲಿಯೂ ಗಂಭೀರ ಆರೋಪಗಳು ಕೇಳಿಬಂದಿವೆ. ರಣಜಿ ಟ್ರೋಫಿ ಹಾಗೂ ಐಪಿಎಲ್‌ನಂತಹ ದೊಡ್ಡ ಟೂರ್ನಿಗಳಲ್ಲಿ ಅವಕಾಶ ಪಡೆಯಲು ಆಯ್ಕೆಗಾರರಿಗೆ ಐಷಾರಾಮಿ ಕಾರುಗಳು, ಮನೆಗಳು ಸೇರಿದಂತೆ ದುಬಾರಿ ಉಡುಗೊರೆಗಳನ್ನು ನೀಡಲಾಗುತ್ತಿದೆ ಎಂದು ಮಾಜಿ ಕ್ರಿಕೆಟರ್ ಆರೋಪಿಸಿದ್ದಾರೆ. ಇದರಿಂದ ಪ್ರತಿಭೆಗೆ ಬದಲಾಗಿ ಹಣ ಮತ್ತು ಪ್ರಭಾವಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ ಎಂಬ ಪ್ರಶ್ನೆಗಳು ಮೂಡಿವೆ.

ಈ ಆರೋಪಗಳು ಸತ್ಯವಾಗಿದ್ದರೆ, ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ಆಟಗಾರರ ಭವಿಷ್ಯಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಪರಿಶ್ರಮ ಮತ್ತು ಸಾಮರ್ಥ್ಯಕ್ಕಿಂತ ಸಂಪರ್ಕ ಹಾಗೂ ಹಣದ ಆಧಾರದ ಮೇಲೆ ತಂಡಗಳು ರಚನೆಯಾದರೆ, ಭಾರತೀಯ ಕ್ರಿಕೆಟ್‌ನ ಗುಣಮಟ್ಟಕ್ಕೂ ಧಕ್ಕೆಯಾಗಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ.

ಈ ನಡುವೆ ವೈರಲ್ ಆಗಿರುವ ವಿಡಿಯೋ ಕುರಿತಾಗಿ ಬಿಸಿಸಿಐ ಮತ್ತು ಸಂಬಂಧಪಟ್ಟ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಪಾರದರ್ಶಕ ತನಿಖೆ ನಡೆಸಬೇಕು ಎಂಬ ಒತ್ತಾಯಗಳು ಹೆಚ್ಚಾಗಿವೆ. ಕ್ರಿಕೆಟ್‌ನ ಗೌರವ ಮತ್ತು ವಿಶ್ವಾಸ ಉಳಿಯಬೇಕಾದರೆ ಇಂತಹ ಆರೋಪಗಳ ಸತ್ಯಾಸತ್ಯತೆಯನ್ನು ಹೊರತರುವುದು ಅಗತ್ಯ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

Related News

error: Content is protected !!