ರಾಯಚೂರಿನಲ್ಲಿ ಸರ್ಕಾರಿ ಕಚೇರಿಯಲ್ಲೇ ಗುಂಡು-ತುಂಡಿನ ಪಾರ್ಟಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಸರ್ಕಾರಿ ಕಚೇರಿಯನ್ನು ವೈಯಕ್ತಿಕ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಂಡು ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಅಮಾನತುಗೊಂಡವರಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ ಹನುಮಪ್ಪ ಆದವಾನಿ, ಪ್ರಥಮ ದರ್ಜೆ ಸಹಾಯಕ ರಾಮಣ್ಣ ಪೂಜಾರಿ ಹಾಗೂ ಕಾವಲುಗಾರ ಹನುಮಂತ ಸೇರಿದ್ದಾರೆ. ಕಚೇರಿಯೊಳಗೆ ಪಾರ್ಟಿ ನಡೆಸಿರುವ ವಿಷಯ ಬಹಿರಂಗವಾಗುತ್ತಿದ್ದಂತೆ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಆರ್.ಡಿ.ಪಿ.ಆರ್. ಇಲಾಖೆಯ ಅಧೀನ ಕಾರ್ಯದರ್ಶಿ ಎಂ. ಚೇತನ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಕಚೇರಿಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತನೆ ನಡೆಸಿರುವುದು ಮತ್ತು ಸಾರ್ವಜನಿಕ ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

error: Content is protected !!