ಉತ್ತರ ಪ್ರದೇಶ ಮುಖ್ಯಮಂತ್ರಿ Yogi Adityanath ಅವರು ರಸ್ತೆಗಳಲ್ಲಿ ನಮಾಜ್‌ ಸಲ್ಲಿಸುವ ಪದ್ಧತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಾರ್ವಜನಿಕ ರಸ್ತೆಗಳು ಜನರ ಸಂಚಾರಕ್ಕಾಗಿ ನಿರ್ಮಿತವಾಗಿವೆ, ಧಾರ್ಮಿಕ ಆಚರಣೆಗಳಿಗೆ ಅಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.

ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಯೋಗಿ, “ಯಾವುದೇ ಧರ್ಮದ ಆಚರಣೆಗಳ ಹೆಸರಿನಲ್ಲಿ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ಸರ್ಕಾರ ಸಹಿಸುವುದಿಲ್ಲ. ರಸ್ತೆಗಳನ್ನು ಬಂದ್‌ ಮಾಡಿ ಪ್ರಾರ್ಥನೆ ನಡೆಸುವ ಹಕ್ಕು ಯಾರಿಗೂ ಇಲ್ಲ. ಪ್ರಾರ್ಥನೆ ಮಾಡಬೇಕಾದರೆ ಅದಕ್ಕಾಗಿ ನಿಗದಿಪಡಿಸಿದ ಸ್ಥಳಗಳಲ್ಲೇ ನಡೆಸಬೇಕು,” ಎಂದು ಹೇಳಿದರು.

ದೇಶಾದ್ಯಂತ ಮೇ 28ರಂದು ನಡೆಯಲಿರುವ Eid al-Adha ಹಬ್ಬದ ಸಿದ್ಧತೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಅವರ ಈ ಹೇಳಿಕೆ ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದೇ ವೇಳೆ, “ನಿಮ್ಮ ಮನೆಗಳಲ್ಲಿ ಅಥವಾ ಪ್ರಾರ್ಥನಾ ಸ್ಥಳಗಳಲ್ಲಿ ಎಲ್ಲರಿಗೂ ಅವಕಾಶ ಸಿಗದಿದ್ದರೆ ಪಾಳಿಗಳಲ್ಲಿ ನಮಾಜ್‌ ಮಾಡಿ. ಆದರೆ ಸಾರ್ವಜನಿಕ ರಸ್ತೆಗಳಲ್ಲಿ ಅರಾಜಕತೆ ಸೃಷ್ಟಿಸಲು ಅವಕಾಶ ಇಲ್ಲ. ಈ ದೇಶದಲ್ಲಿ ಬದುಕಬೇಕಾದರೆ ಕಾನೂನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು,” ಎಂದು ಯೋಗಿ ಎಚ್ಚರಿಕೆ ನೀಡಿದರು.

ಅವರು ಮುಂದುವರೆದು, “ಶಾಂತಿಯುತವಾಗಿ ನಿಯಮ ಪಾಲಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಇಲ್ಲವಾದರೆ ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಬೇಕು,” ಎಂದರು.

ಬರೇಲಿಯಲ್ಲಿ ಇತ್ತೀಚೆಗೆ ಕೆಲವು ವ್ಯಕ್ತಿಗಳು ಸರ್ಕಾರದ ಇಚ್ಛಾಶಕ್ತಿಯನ್ನು ಪರೀಕ್ಷಿಸಲು ಯತ್ನಿಸಿದ್ದರು. ಆದರೆ ನಂತರ ಅವರಿಗೆ ಸರ್ಕಾರದ ಕಠಿಣ ಕ್ರಮದ ಶಕ್ತಿ ಏನು ಎಂಬುದು ತಿಳಿಯಿತು ಎಂದು ಕೂಡ ಸಿಎಂ ಯೋಗಿ ಹೇಳಿದರು.

Related News

error: Content is protected !!