ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಪ್ರೀತಿಸಿ ಮದುವೆಯಾದ ಬಳಿಕ ಗರ್ಭಿಣಿ ಪತ್ನಿಯನ್ನು ಕೈಬಿಟ್ಟು ಮತ್ತೊಂದು ಮದುವೆಗೆ ಸಿದ್ಧನಾಗಿರುವ ಪತಿಯ ವಿರುದ್ಧ ಯುವತಿಯೊಬ್ಬಳು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆಯ ನಿವಾಸಿಯಾದ ಸಂತ್ರಸ್ತೆ, ಸುಮಾರು ಏಳು ವರ್ಷಗಳ ಹಿಂದೆ ಕಾಲೇಜಿನಲ್ಲಿ ಓದುತ್ತಿದ್ದಾಗ ಜೆರಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬೊಮ್ಮಾನಾಯಕ್ ಎಂಬಾತನ ಪರಿಚಯವಾಗಿತ್ತು. ಪ್ಯಾನ್ ಕಾರ್ಡ್ ಮಾಡಿಸಲು ಹೋಗಿದ್ದ ವೇಳೆ ಆರಂಭವಾದ ಈ ಪರಿಚಯ, ನಂತರ ಪ್ರೀತಿಗೆ ತಿರುಗಿತ್ತು. ಪೋಷಕರ ವಿರೋಧದ ನಡುವೆಯೂ ಇಬ್ಬರೂ ಪಾವಗಡದ ದೇವಸ್ಥಾನದಲ್ಲಿ ವಿವಾಹವಾಗಿದ್ದರು.

ಮದುವೆಯಾದ ಬಳಿಕ ಸುಮಾರು ಒಂದೂವರೆ ವರ್ಷ ಸುಖ ಜೀವನ ನಡೆಸಿದ ಜೋಡಿಗೆ, ನಂತರ ಸಮಸ್ಯೆಗಳು ಎದುರಾದವು. ಗರ್ಭಿಣಿಯಾಗಿದ್ದ ಪತ್ನಿಯನ್ನು ಬೊಮ್ಮಾನಾಯಕ್ ತನ್ನ ಪೋಷಕರ ಮಾತಿಗೆ ಮರುಳಾಗಿ ದೂರ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಇದೇ ವೇಳೆ ಆತನ ಕುಟುಂಬದವರು ಮತ್ತೊಂದು ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ವಿಷಯವನ್ನು ಪ್ರಶ್ನಿಸಿದಾಗ, ಪತಿ ಹಾಗೂ ಅವರ ಕುಟುಂಬಸ್ಥರು ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಆರು ತಿಂಗಳ ಗರ್ಭಿಣಿಯಾಗಿರುವ ಯುವತಿ ತನ್ನ ಹಾಗೂ ಗರ್ಭದಲ್ಲಿರುವ ಮಗುವಿನ ಭವಿಷ್ಯಕ್ಕಾಗಿ ನ್ಯಾಯ ಕೋರುತ್ತಿದ್ದು, “ನನಗೆ ನನ್ನ ಗಂಡ ಬೇಕು” ಎಂದು ಬೇಡಿಕೆ ಇಟ್ಟಿದ್ದಾಳೆ. ಈ ಸಂಬಂಧ ಬೊಮ್ಮಾನಾಯಕ್, ಅವರ ತಾಯಿ ಕರಿಯಮ್ಮ ಸೇರಿದಂತೆ ನಾಲ್ವರ ವಿರುದ್ಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!