ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಂಟಲಿಜೆನ್ಸ್ ಪಿಎಸ್‌ಐ ವಿರೇಶ್ ಆಲೂರು ಅವರು ಮಹಿಳಾ ಪೇದೆ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಘಟನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿ ಇದ್ದೆವು, ಆದರೆ ಈಗ ಮದುವೆಯ ಹಂತದಲ್ಲಿ ಜಾತಿಯ ಕಾರಣ ಹೇಳಿ ನನ್ನನ್ನು ದೂರ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದ ಮೂಲದ ವಿರೇಶ್ ಆಲೂರು ಹಾಗೂ ಅಲ್ಲೇ ಸಮೀಪದ ಬಳಗಾನೂರಿನ ಮಹಿಳಾ ಪೇದೆ ನಡುವೆ ಸುಮಾರು ಎಂಟು ವರ್ಷಗಳ ಹಿಂದೆ ಪರಿಚಯವಾಗಿತ್ತು. ಸಿಂದಗಿಯ ಶ್ರೀ ಮಾತಾ ಕೋಚಿಂಗ್ ಸೆಂಟರ್‌ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದ ವೇಳೆ ಇಬ್ಬರ ಪರಿಚಯ ಪ್ರಾರಂಭವಾಗಿ, ನಂತರ ಅದು ಸ್ನೇಹದಿಂದ ಪ್ರೀತಿಗೆ ತಿರುಗಿದೆ ಎಂದು ಹೇಳಲಾಗಿದೆ.

ಇಬ್ಬರ ನಡುವೆ ದೀರ್ಘಕಾಲದ ಆತ್ಮೀಯ ಸಂಬಂಧ ಬೆಳೆದಿದ್ದು, ರಾಯಚೂರಿನ ಬಾಲಮರೆಮ್ಮ ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡು ಗಂಡ-ಹೆಂಡತಿಯಂತೆ ಬದುಕಿದ್ದೇವೆ ಎಂದು ವಿರೇಶ್ ಆರೋಪಿಸಿದ್ದಾರೆ. ಈ ಅವಧಿಯಲ್ಲಿ ಮೂರು ಬಾರಿ ಗರ್ಭಪಾತ ನಡೆದಿದೆ ಎಂಬುದನ್ನೂ ಅವರು ತಿಳಿಸಿದ್ದಾರೆ.

ಇದಷ್ಟೇ ಅಲ್ಲದೆ, ಮಹಿಳಾ ಪೇದೆ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ ಸುಮಾರು 35 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಾರೆ. ಆದರೆ ಇದೀಗ ಹಣವನ್ನು ಹಿಂದಿರುಗಿಸದೇ, ಮದುವೆಗೆ ನಿರಾಕರಿಸಿ ವಂಚನೆ ಮಾಡುತ್ತಿದ್ದಾರೆ ಎಂದು ವಿರೇಶ್ ದೂರಿದ್ದಾರೆ.

ಇಷ್ಟು ವರ್ಷಗಳ ಸಂಬಂಧದ ನಂತರ, ಮದುವೆಯ ವಿಚಾರ ಬಂದಾಗ ‘ಜಾತಿ’ಯ ವಿಷಯವನ್ನು ಮುಂದಿಟ್ಟುಕೊಂಡು ದೂರವಾಗುತ್ತಿರುವುದಾಗಿ ಆರೋಪಿಸಿರುವ ಅವರು, “ಇಷ್ಟು ದಿನ ಇಲ್ಲದ ಜಾತಿ ಈಗ ಏಕೆ?” ಎಂದು ಪ್ರಶ್ನಿಸಿದ್ದಾರೆ. ತಮ್ಮ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ಜೀವನವನ್ನೇ ಹಾಳು ಮಾಡಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಇದರ ನಡುವೆ, ಮಹಿಳಾ ಪೇದೆಯ ಮದುವೆ ಮೇ 7ರಂದು ರಾಯಚೂರಿನಲ್ಲಿ ಮತ್ತೊಬ್ಬ ಯುವಕನೊಂದಿಗೆ ನಿಶ್ಚಯವಾಗಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ಮದುವೆಯನ್ನು ತಡೆಯುವಂತೆ ಮತ್ತು ತನಗೆ ನ್ಯಾಯ ದೊರಕುವಂತೆ ವಿರೇಶ್ ಆಗ್ರಹಿಸಿದ್ದಾರೆ.

ಪೊಲೀಸ್ ಇಲಾಖೆಯ ಇಬ್ಬರು ಸಿಬ್ಬಂದಿಗಳ ನಡುವಿನ ಈ ವಿವಾದ ಈಗ ಪೊಲೀಸ್ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಪ್ರಕರಣ ಯಾವ ದಿಕ್ಕಿಗೆ ತಿರುಗಲಿದೆ ಎಂಬುದು ಕಾದು ನೋಡಬೇಕಾಗಿದೆ.

error: Content is protected !!