ಬೆಂಗಳೂರು: ನಗರಾದ್ಯಂತ ಬಾಡಿಗೆ ಮನೆಗಳನ್ನು ಅಡ್ಡೆಯಾಗಿ ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಬಯಲಿಗೆಳೆದಿದ್ದು, ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಈ ಕುರಿತು ಸೋಮವಾರ ಪ್ರಕಟಣೆ ಹೊರಡಿಸಿರುವ ಅವರು, ದಂಧೆಗೆ ಬಲವಂತವಾಗಿ ತಳ್ಳಲ್ಪಟ್ಟಿದ್ದ ನಾಲ್ವರು ಯುವತಿಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪದ್ಮನಾಭನಗರ, ಆರ್.ಕೆ. ಲೇಔಟ್, ಸುಂದರನಗರ ಹಾಗೂ ಎನ್‌ಜಿಎಫ್ ಲೇಔಟ್ ಪ್ರದೇಶಗಳಲ್ಲಿನ ಬಾಡಿಗೆ ಮನೆಗಳಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಕೇಂದ್ರ ಅಪರಾಧ ವಿಭಾಗದ ಮಹಿಳಾ ರಕ್ಷಣಾ ಘಟಕದ ಪೊಲೀಸರು ಸಮನ್ವಯದೊಂದಿಗೆ ದಾಳಿ ನಡೆಸಿದ್ದಾರೆ.

ಮಾಹಿತಿದಾರರಿಂದ ದೊರೆತ ಸುಳಿವಿನ ಆಧಾರದ ಮೇಲೆ ವಿವಿಧ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ದಾಳಿಯ ವೇಳೆ ಸ್ಥಳದಲ್ಲಿದ್ದ ಯುವತಿಯರನ್ನು ರಕ್ಷಿಸಿ, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಲ್ಲಿ ಇಬ್ಬರು ಮಹಿಳೆಯರು ಇತರರನ್ನು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದವರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.

ಪರಿಶೀಲನೆಯ ವೇಳೆ ಆರೋಪಿಗಳು ಹಣದಾಸೆಗೆ ಒಳಗಾಗಿ, ವೇಶ್ಯಾವಾಟಿಕೆ ಸೇವೆ ಬಯಸುವ ಗ್ರಾಹಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಬಾಡಿಗೆ ಮನೆಗಳಿಗೆ ಕರೆಸಿಕೊಳ್ಳುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯಪುರ, ಜಾಲಹಳ್ಳಿ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.

Related News

error: Content is protected !!