ಬೆಂಗಳೂರಿನಲ್ಲಿ ದುಃಖದ ಸುದ್ದಿ ಬೆಳಕಿಗೆ ಬಂದಿದೆ. ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಬೆಸ್ಕಾಂ ವಿಜಿಲೆನ್ಸ್ ವಿಭಾಗದ ಎಸ್‌ಪಿ ಬಿ.ಎನ್. ಲಾವಣ್ಯ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಧ್ಯಾಹ್ನ ಸುಮಾರು 2:30ರ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಗ್ರಾಮದ ಮೂಲ ನಿವಾಸಿಯಾಗಿದ್ದ ಲಾವಣ್ಯ ಅವರು 2023ರಿಂದ ಬೆಸ್ಕಾಂ ವಿಜಿಲೆನ್ಸ್ ವಿಭಾಗದಲ್ಲಿ ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಕರ್ತವ್ಯನಿಷ್ಠೆ ಮತ್ತು ದಕ್ಷತೆಯಿಂದ ಗುರುತಿಸಿಕೊಂಡಿದ್ದ ಅವರು, ಮಂಡ್ಯ ಮತ್ತು ಬಳ್ಳಾರಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ (ASP) ಹಾಗೂ ಬೆಂಗಳೂರಿನ ಇಂಟೆಲಿಜೆನ್ಸ್ ಮತ್ತು ಡಿಸಿಆರ್‌ಬಿಯಲ್ಲಿ ಎಸ್‌ಪಿಯಾಗಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದರು.

ಮೃತ ಲಾವಣ್ಯ ಅವರು ಪತಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು — 10 ವರ್ಷದ ಗಂಡು ಮಗು ಮತ್ತು 3 ವರ್ಷದ ಹೆಣ್ಣು ಮಗು — ಅಗಲಿದ್ದು, ಕುಟುಂಬದವರ ದುಃಖಕ್ಕೆ ಕಾರಣರಾಗಿದ್ದಾರೆ.

ಇತ್ತೀಚೆಗಷ್ಟೇ ಡಿಜಿ ಮತ್ತು ಐಜಿಪಿ ಡಾ. ಎಂ.ಎ ಸಲೀಂ ಅವರು ವಿದ್ಯಾರಣ್ಯಪುರದಲ್ಲಿರುವ ಲಾವಣ್ಯ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದರು. ಅವರ ಅಕಾಲಿಕ ನಿಧನಕ್ಕೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Related News

error: Content is protected !!