ಲಿಂಗಸಗೂರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕಳ್ಳಭಟ್ಟಿ ಸರಾಯಿ ದಂಧೆಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಚುರುಕಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಬುಧವಾರ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದೆ.

ಮುದಗಲ್ ಸಮೀಪದ ಜವಾಹರ್ ನವೋದಯ ಶಾಲೆ ಕಾಂಪೌಂಡ್ ಹತ್ತಿರದ ರೇಷ್ಮೆ ತಾಂಡದ ಕಚ್ಚಾ ರಸ್ತೆಯಲ್ಲಿ ಬೈಕ್ ಮೂಲಕ ಅಕ್ರಮವಾಗಿ ಕಳ್ಳಭಟ್ಟಿ ಸರಾಯಿ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು. ಈ ಕಾರ್ಯಾಚರಣೆಗೆ ವೃತ್ತ ನಿರೀಕ್ಷಕಿ ಲಕ್ಷ್ಮಿದೇವಿ ನೇತೃತ್ವ ವಹಿಸಿದ್ದರು.

ದಾಳಿ ವೇಳೆ ಬಜಾಜ್ ಪಲ್ಸರ್-125 ದ್ವಿಚಕ್ರ ವಾಹನವನ್ನು ತಪಾಸಣೆ ನಡೆಸಿದ ಅಧಿಕಾರಿಗಳು, ಸುಮಾರು 4 ಲೀಟರ್ ಕಳ್ಳಭಟ್ಟಿ ಸರಾಯಿ ಪತ್ತೆಹಚ್ಚಿದರು. ಈ ಸಂಬಂಧ ಮರಿಯಮ್ಮನಹಳ್ಳಿ ಗ್ರಾಮದ ರಾಜು (ತಂದೆ: ಮರಿಯಪ್ಪ), ಮತಿಹಾಸ (ತಂದೆ: ಬಾಲಪ್ಪ ಉಯ್ಯಾಲ) ಹಾಗೂ ದೇಶಪ್ಪ (ತಂದೆ: ಬಸ್ತನಪ್ಪ) ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಅಬಕಾರಿ ಇಲಾಖೆ ಕರ್ನಾಟಕದ ಅಪರ ಆಯುಕ್ತರು (ಜಾರಿ ಮತ್ತು ಅಪರಾಧ) ಕೇಂದ್ರ ಬೆಳಗಾವಿ ಅವರ ಆದೇಶದಂತೆ, ಕಲಬುರ್ಗಿ ವಿಭಾಗದ ಜಂಟಿ ಆಯುಕ್ತರು, ರಾಯಚೂರು ಜಿಲ್ಲೆಯ ಉಪ ಆಯುಕ್ತರು ಮತ್ತು ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.

ಪಂಚರ ಸಮಕ್ಷಮ ಮದ್ಯವನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಬಳಸಿದ ವಾಹನದ ಮಾಲೀಕನ ಪತ್ತೆಗೆ ಮುಂದಿನ ತನಿಖೆ ನಡೆಯುತ್ತಿದೆ.

ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಬಸವರಾಜ್, ಸಿಬ್ಬಂದಿಗಳಾದ ಮಂಜುನಾಥ್ ಹಾಗೂ ಮುಖ್ಯಪೇದೆ ಅಮರೇಶ್ ಸೇರಿದಂತೆ ಗೃಹರಕ್ಷಕ ದಳದ ಸಿಬ್ಬಂದಿಗಳು ಭಾಗವಹಿಸಿದ್ದರು.

Related News

error: Content is protected !!