ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಹುಟ್ಟುಹಬ್ಬದ ಸಂಭ್ರಮವೇ ಭೀಕರ ದುರಂತಕ್ಕೆ ಕಾರಣವಾದ ಘಟನೆ ಬೆಳಕಿಗೆ ಬಂದಿದೆ. ಸ್ನೇಹಿತರ ನಡುವೆ ನಡೆದ ಸಣ್ಣ ಗಲಾಟೆ ಕ್ಷಣಾರ್ಧದಲ್ಲಿ ಹಿಂಸೆಗೆ ತಿರುಗಿ, ಮೂವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

ಮೃತರನ್ನು ಅಮರ್‌ದೀಪ್ ಸೈನಿ, ಮನೀಶ್ ಸೈನಿ ಹಾಗೂ ಆಕಾಶ್ ಸೈನಿ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಜೀತು ಸೈನಿ ಹುಟ್ಟುಹಬ್ಬದ ಪಾರ್ಟಿಯ ವೇಳೆ ಈ ಘಟನೆ ನಡೆದಿದ್ದು, ಬಳಿಕ ಆತ ಪರಾರಿಯಾಗಿದ್ದಾನೆ.

ಪೊಲೀಸರ ಪ್ರಕಾರ, ಸ್ಥಳೀಯ ಜಿಮ್‌ನಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದ ವೇಳೆ ಸ್ನೇಹಿತರು ಜೀತು ಸೈನಿ ಮುಖಕ್ಕೆ ಕೇಕ್ ಹಚ್ಚಿದ್ದರು. ಇದರಿಂದ ಕೋಪಗೊಂಡ ಆತ ಹಾಗೂ ಆತನೊಂದಿಗೆ ಇದ್ದ ಇನ್ನೂ ಕೆಲವರು ಪರವಾನಗಿ ಪಡೆದ ಬಂದೂಕುಗಳನ್ನು ಬಳಸಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮವಾಗಿ ಮೂವರು ಯುವಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಬುಲಂದ್‌ಶಹರ್ ಗ್ರಾಮೀಣ ಎಸ್‌ಪಿ ಅಂತರಿಕ್ಷ್ ಜೈನ್ ತಿಳಿಸಿದ್ದಾರೆ: ತಡರಾತ್ರಿ ಖುರ್ಜಾ ನಗರ ಪೊಲೀಸ್ ಠಾಣೆಗೆ ಗುಂಡಿನ ದಾಳಿ ಕುರಿತು ಮಾಹಿತಿ ಲಭಿಸಿದ್ದಂತೆ ತಕ್ಷಣವೇ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ಅವರನ್ನು ಮೃತರೆಂದು ಘೋಷಿಸಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಪ್ರಕರಣದ ತನಿಖೆಗೆ ಆರು ಮಂದಿ ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದ್ದು, ಕೆಲವು ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕುಟುಂಬದವರು ಕೆಲವರ ಹೆಸರನ್ನು ನೀಡಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮೃತ ಅಮರ್‌ದೀಪ್‌ನ ಸಹೋದರ ಸಂಜಯ್ ಸೈನಿ ಹೇಳುವಂತೆ, ಸಣ್ಣ ವಾಗ್ವಾದದ ಬಳಿಕ ಆರೋಪಿಗಳು ಸ್ಥಳದಿಂದ ತೆರಳಿ ಮತ್ತೆ ಬಂದೂಕುಗಳೊಂದಿಗೆ ಮರಳಿ ಬಂದಿದ್ದಾರೆ. ಬಳಿಕ ಅಮರ್‌ದೀಪ್, ಮನೀಶ್ ಹಾಗೂ ಆಕಾಶ್ ಅವರನ್ನು ಕರೆದು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಅವರಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ನೀಡಲಾಗಿಲ್ಲ.

ಘಟನೆಯ ನಂತರ ಮೀರತ್ ರೇಂಜ್‌ನ ಡಿಐಜಿ ಹಾಗೂ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಣ್ಣ ವಿಚಾರದಿಂದ ಆರಂಭವಾದ ಜಗಳವೇ ಭೀಕರ ಹತ್ಯೆಗೆ ಕಾರಣವಾಗಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

Related News

error: Content is protected !!