ಮಧ್ಯಪ್ರದೇಶದಲ್ಲಿ ಜನಪ್ರತಿನಿಧಿಗಳ ವರ್ತನೆ ಕುರಿತ ವಿವಾದಗಳು ತಣಿಯುವ ಮುನ್ನವೇ ಮತ್ತೊಂದು ಅಧಿಕಾರದ ದರ್ಪದ ಘಟನೆ ಬೆಳಕಿಗೆ ಬಂದಿದೆ. ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ‘ಮಹಿಳಾ ಸಬಲೀಕರಣ’ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಕ್ಯಾಬಿನೆಟ್ ಸಚಿವ ನಾಗರ್ ಸಿಂಗ್ ಚೌಹಾಣ್ ಅವರ ಸಹೋದರ ಇಂದರ್ ಸಿಂಗ್ ಚೌಹಾಣ್ ಮಹಿಳಾ ಅಧಿಕಾರಿಗೆ ಬಹಿರಂಗವಾಗಿ ಬೆದರಿಕೆ ಹಾಕಿರುವ ಘಟನೆ ಆತಂಕ ಮೂಡಿಸಿದೆ.
ಏಪ್ರಿಲ್ 22ರಂದು ಅಲಿರಾಜ್ಪುರದ ಜನಪದ ಪಂಚಾಯತ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ‘ಕನ್ಯಾ ವಿವಾಹ ಯೋಜನೆ’ಯಡಿ ಸಲ್ಲಿಸಲಾದ ಅನರ್ಹ ಅರ್ಜಿಗಳನ್ನು ತಿರಸ್ಕರಿಸಿದ್ದರಿಂದ ಕೋಪಗೊಂಡ ಇಂದರ್ ಸಿಂಗ್ ಚೌಹಾಣ್, ಸಿಇಒ ಪ್ರಿಯಾ ಕಾಗ್ ಅವರ ಕಚೇರಿಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ. “ನಿನ್ನ ಹಲ್ಲು ಉದುರಿಸುತ್ತೇನೆ, ಜೀವಂತವಾಗಿ ಹೂತುಹಾಕುತ್ತೇನೆ, ಇಲ್ಲಿ ಎಲ್ಲವೂ ನನ್ನ ಇಚ್ಛೆಯಂತೆ ನಡೆಯಬೇಕು” ಎಂದು ಬೆದರಿಕೆ ಹಾಕಿರುವುದಾಗಿ ಪ್ರಿಯಾ ಕಾಗ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ಕಠಿಣ ಹಾಗೂ ಜಾಮೀನು ರಹಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಏಪ್ರಿಲ್ 24ರಂದು ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಬಂಧನದ ಕೆಲವೇ ಗಂಟೆಗಳಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಇಂದರ್ ಸಿಂಗ್ ಚೌಹಾಣ್ ವಿರುದ್ಧದ ಅಪರಾಧ ಹಿನ್ನೆಲೆಯೂ ಗಂಭೀರವಾಗಿದೆ. ಕಳೆದ 32 ವರ್ಷಗಳಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ, ಡಕಾಯಿತಿ ಸೇರಿದಂತೆ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ, ಇದುವರೆಗೆ ಯಾವುದೇ ಪ್ರಕರಣದಲ್ಲೂ ಶಿಕ್ಷೆಯಾಗಿಲ್ಲ ಎನ್ನುವುದು ಗಮನಾರ್ಹ.
ಈ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಅಧಿಕಾರ ದುರುಪಯೋಗದ ಬಗ್ಗೆ ಮತ್ತೊಮ್ಮೆ ಚರ್ಚೆ ಎಬ್ಬಿಸಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
