ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ‘ಹೈವೇ ನೆಸ್ಟ್’ ಚಹಾ ಅಂಗಡಿಯಲ್ಲಿ ನಡೆದ ದೌರ್ಜನ್ಯ ಪ್ರಕರಣ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಅವರ ತಂಡ ಒಬ್ಬ ಯುವಕನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿದಿನದಂತೆ ಮುಂಜಾನೆ 4 ಗಂಟೆಗೆ ಅಂಗಡಿ ತೆರೆದು ಪ್ರಯಾಣಿಕರಿಗೆ ಸೇವೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಯುವಕನ ಬಳಿ ದೇವನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ರಾಕೇಶ್ ಮತ್ತು ಅವರ ತಂಡ ಬಂದಿದ್ದಾರೆ. “ಇಷ್ಟು ಬೇಗ ಅಂಗಡಿ ಏಕೆ ತೆರೆದಿದ್ದೀಯ?” ಎಂದು ಪ್ರಶ್ನಿಸಿದ ಪೊಲೀಸರು, ಮಾತಿನಲ್ಲೇ ನಿಲ್ಲದೆ ಆತನನ್ನು ಹೊರಗೆಳೆದು ಲಾಠಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹಲ್ಲೆ ನಡೆಯುತ್ತಿದ್ದಾಗ ಯುವಕ “ನನ್ನ ಹೊಡೆಯಬೇಡಿ ಸರ್, ಇನ್ನು ಮುಂದೆ ಅಂಗಡಿ ತೆರೆಯುವುದಿಲ್ಲ” ಎಂದು ಬೇಡಿಕೊಂಡಿದ್ದರೂ, ಪೊಲೀಸರು ದಯೆ ತೋರಿಲ್ಲ ಎನ್ನಲಾಗಿದೆ. ಈ ದೃಶ್ಯವನ್ನು ಕಂಡ ಗ್ರಾಹಕರು ಬೆಚ್ಚಿಬಿದ್ದಿದ್ದು, ಪೊಲೀಸರ ವರ್ತನೆಯನ್ನು ಖಂಡಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಇದೀಗ ಅದು ವೈರಲ್ ಆಗಿದೆ.
ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಮುಂಜಾನೆ ಚಹಾ ಸಿಗುವುದು ಅಗತ್ಯ ಸೇವೆಯಂತೆ ಇರುವ ಸಂದರ್ಭದಲ್ಲಿ, ಬಡ ಯುವಕನ ಮೇಲೆ ಇಂತಹ ಕ್ರೂರ ವರ್ತನೆ ನಡೆಸಿರುವುದು ಪ್ರಶ್ನೆಗಳನ್ನು ಎಬ್ಬಿಸಿದೆ. ನಿಯಮ ಉಲ್ಲಂಘನೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.
ಈ ಘಟನೆ ಪೊಲೀಸ್ ಇಲಾಖೆಯ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆ ತಂದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಹೆಚ್ಚಾಗಿದೆ. ಇನ್ನೂ ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಜನರು ವಿಡಿಯೋ ಹಂಚಿಕೊಂಡು, ಹಿರಿಯ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
