ವಿಜಯಪುರ ಜಿಲ್ಲೆಯಲ್ಲಿ ಮಾನವೀಯತೆಯನ್ನು ಕಳೆದುಹೋಗುವಂತೆ ಮಾಡುವ ಕ್ರೂರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ತನ್ನ ಮಗನು ತನ್ನಂತಿಲ್ಲ ಎಂಬ ಅಸಂಬದ್ಧ ಕಾರಣಕ್ಕೆ ತಂದೆಯೇ ಆರು ವರ್ಷದ ಮಗುವನ್ನು ಹತ್ಯೆ ಮಾಡಿರುವ ಘಟನೆ ಸಮಾಜವನ್ನು ಬೆಚ್ಚಿಬೀಳಿಸಿದೆ.
ಜಿಲ್ಲೆಯ ನಾಗಠಾಣ ಗ್ರಾಮದ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ (6) ಹತ್ಯೆಗೆ ಗುರಿಯಾದ ಬಾಲಕನಾಗಿದ್ದಾನೆ. ಈ ಪ್ರಕರಣದಲ್ಲಿ ಬಾಲಕನ ತಂದೆ ಮಲ್ಲಿಕಾರ್ಜುನ ಅರಕೇರಿ ಎಂಬಾತನೇ ಆರೋಪಿ.
ಮಾರ್ಚ್ 16ರಂದು ಮಗನನ್ನು ಶಾಲೆಗೆ ಸೇರಿಸುವ ನೆಪದಲ್ಲಿ ಕರೆದುಕೊಂಡು ಹೋದ ಮಲ್ಲಿಕಾರ್ಜುನ, ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಸಮೀಪದ ಕೃಷ್ಣಾ ನದಿಗೆ ಕರೆದುಕೊಂಡು ಹೋಗಿ, ನದಿಗೆ ತಳ್ಳುವ ಮೂಲಕ ಹತ್ಯೆಗೈದಿದ್ದಾನೆ.
ಗ್ರಾಮದಲ್ಲಿ “ಮಗ ನಿನ್ನಂತಿಲ್ಲ” ಎಂದು ಕೆಲವರು ಹಾಸ್ಯ ಮಾಡುತ್ತಿದ್ದುದನ್ನು ಗಂಭೀರವಾಗಿ ತೆಗೆದುಕೊಂಡ ಮಲ್ಲಿಕಾರ್ಜುನ, ತನ್ನದೇ ಮಗನ ವಿರುದ್ಧ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಘಟನೆ ನಂತರ, ಮಗನನ್ನು ಸಿಂದಗಿ ಬಳಿ ಇರುವ ಶಾಲೆಯಲ್ಲಿ ಹಾಸ್ಟೆಲ್ಗೆ ಸೇರಿಸಿದ್ದಾಗಿ ಕುಟುಂಬಸ್ಥರಿಗೆ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದ. ಆದರೆ ಏಪ್ರಿಲ್ 1ರಂದು ಮಗನ ಹುಟ್ಟುಹಬ್ಬದಂದು ಮನೆಗೆ ಕರೆದುಕೊಂಡು ಬರಬೇಕೆಂದು ತಾಯಿ ಭಾಗ್ಯಶ್ರೀ ಒತ್ತಾಯಿಸಿದ್ದಳು. ಈ ವೇಳೆ ಮಲ್ಲಿಕಾರ್ಜುನ ಮನೆಯಿಂದ ಪರಾರಿಯಾದುದು ಅನುಮಾನಕ್ಕೆ ಕಾರಣವಾಯಿತು.
ತಕ್ಷಣವೇ ತಾಯಿ ಭಾಗ್ಯಶ್ರೀ ಪೊಲೀಸರಿಗೆ ದೂರು ನೀಡಿದ್ದಳು. ನಂತರ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಮಲ್ಲಿಕಾರ್ಜುನ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಈ ಘಟನೆ ತಂದೆ-ಮಗ ಸಂಬಂಧದ ಮೇಲೆಯೇ ಪ್ರಶ್ನೆ ಹುಟ್ಟಿಸುವಂತಿದ್ದು, ಸಮಾಜದಲ್ಲಿ ಸಂವೇದನೆ ಮತ್ತು ಮೌಲ್ಯಗಳ ಕುಸಿತವನ್ನು ಸ್ಪಷ್ಟಪಡಿಸುತ್ತದೆ.
