ವಿಜಯಪುರ ನಗರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಸೀತಾರಾಮ್ ಲಮಾಣಿ ವಿರುದ್ಧ ಗಂಭೀರ ಭ್ರಷ್ಟಾಚಾರ ಹಾಗೂ ಕಿರುಕುಳ ಆರೋಪಗಳು ಕೇಳಿಬಂದಿವೆ. ಠಾಣೆಯ ಸಿಬ್ಬಂದಿ ಈ ವಿಷಯದಲ್ಲಿ ಬೇಸತ್ತು ಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಾಮೂಹಿಕ ದಯಾಮರಣ ಕೋರಿ ಪತ್ರ ಬರೆದಿರುವುದು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.

ಪಿಎಸ್‌ಐ ಲಮಾಣಿ ಅವರನ್ನು ಆದರ್ಶನಗರ ಠಾಣೆಯಿಂದ ತಿಕೋಟ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಹಣ ಸಂಗ್ರಹಿಸುವ ಉದ್ದೇಶದಿಂದ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸಾರ್ವಜನಿಕರು ಹಾಗೂ ಠಾಣಾ ಸಿಬ್ಬಂದಿ ಇಬ್ಬರೂ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಠಾಣೆಯಲ್ಲಿ ದಾಖಲಾಗುವ ಎಫ್‌ಐಆರ್‌ಗಳು ಮತ್ತು ದೂರುಗಳ ಸಂಬಂಧ ದೂರುದಾರರಿಂದ 10,000 ರೂ.ದಿಂದ 1 ಲಕ್ಷ ರೂ.ವರೆಗೆ ಹಣ ವಸೂಲಿ ಮಾಡಲು ಸಿಬ್ಬಂದಿಗೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ. ಈ ವಸೂಲಿಗೆ ‘5.0’ ಎಂಬ ಕೋಡ್ ಬಳಸಲಾಗುತ್ತಿದ್ದು, ಅದರ ಅರ್ಥ 50,000 ರೂ. ಎಂದು ಹೇಳಲಾಗಿದೆ.

ಇದರ ಜೊತೆಗೆ ಬಾರ್, ಸ್ಪಾ, ಸಿಗರೇಟ್, ಮಾವಾ (ತಂಬಾಕು) ವ್ಯಾಪಾರಗಳು ಹಾಗೂ ವೇಶ್ಯಾವಾಟಿಕೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳಿಂದ ಹಣ ಸಂಗ್ರಹಿಸಲು ಸಹ ಸಿಬ್ಬಂದಿಗೆ ಒತ್ತಡ ಹೇರುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಈ ಬೆಳವಣಿಗೆ ಪೊಲೀಸ್ ಇಲಾಖೆಯೊಳಗಿನ ಭ್ರಷ್ಟಾಚಾರದ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎಬ್ಬಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related News

error: Content is protected !!