ಗೌರಿಬಿದನೂರು ನಗರದ ನ್ಯಾಷನಲ್ ಕಾಲೇಜು ಮುಂಭಾಗದ ವಿ.ವಿ.ಪುರಂ ಪ್ರದೇಶದಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೃತ ವ್ಯಕ್ತಿ ಶಿವಕುಮಾರ್ ಅಲಿಯಾಸ್ ಸಾದಿಕ್ ಪಾಷಾ (45) ಆಗಿದ್ದು, ತಮ್ಮ ಮನೆಯಲ್ಲೇ ಹಲ್ಲೆಗೆ ಒಳಗಾಗಿ ಮೃತಪಟ್ಟಿದ್ದರು. ಈ ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಮೃತನ ಪತ್ನಿ ರೇಷ್ಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆಯ ವೇಳೆ ಸಂಬಂಧಿಕ ಶಾರುಖ್ (23) ತನ್ನ ನಾಲ್ವರು ಸ್ನೇಹಿತರಾದ ಪಾರ್ಥ (20), ಅಕ್ಷಯ್ (20), ಆನಂದ್ ಬಾಬು (29) ಹಾಗೂ ರಾಮು (28) ಜೊತೆಗೂಡಿ ಕೊಲೆ ನಡೆಸಿರುವುದು ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಕೊಲೆಗೆ ಸಂಚು ರೂಪಿಸಿದ ಶಾರುಖ್, ಆಂಧ್ರಪ್ರದೇಶದ ತೆನಾಲಿಯಿಂದ ತನ್ನ ಸ್ನೇಹಿತರನ್ನು ಕರೆಸಿಕೊಂಡಿದ್ದನು. ಶುಕ್ರವಾರ ರಾತ್ರಿ ಶಿವಕುಮಾರ್ ಅವರ ಮನೆಯಲ್ಲಿ, ಮನೆಯಲ್ಲಿದ್ದ ಮಕ್ಕಳನ್ನು ಬೇರೆ ಕೊಠಡಿಗೆ ಕಳುಹಿಸಿ ಬಾಗಿಲು ಹಾಕಿ, ಮಲಗಿದ್ದ ಶಿವಕುಮಾರ್ ಮೇಲೆ ದಾಳಿ ನಡೆಸಲಾಗಿದೆ. ಆರೋಪಿಗಳು ಬಾಯಿ, ಕೈ-ಕಾಲುಗಳನ್ನು ಹಿಡಿದುಕೊಂಡು ಕಟ್ಟಿಗೆ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಿದ್ದು, ಕಾಲುಗಳು ಮತ್ತು ಬೆನ್ನು ಮೂಳೆ ಮುರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಲೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದರು. ತನಿಖೆ ಮುಂದುವರಿಸಿದ ಪೊಲೀಸರು, ತೆನಾಲಿಯಲ್ಲಿ ಆರೋಪಿಗಳಿರುವ ಮಾಹಿತಿ ಪಡೆದು ಐವರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವೃತ್ತ ನಿರೀಕ್ಷಕ ಅಂಜನ್ ಕುಮಾರ್ ತಿಳಿಸಿದ್ದಾರೆ.

ವರದಿ: ಅವಿನಾಶ್

https://www.brastarabete.com/suspicious-death-of-man-who-went-to-pick-up-wife-and-children-suspicion-on-wife/

Related News

error: Content is protected !!