ದೊಡ್ಡಬಳ್ಳಾಪುರ ತಾಲ್ಲೂಕಿನ ಬೀಸುವನಹಳ್ಳಿ ಗ್ರಾಮದ ಶಿವಕುಮಾರ್ ಅಲಿಯಾಸ್ ಸಾದಿಕ್ (40) ಅವರ ಅನುಮಾನಾಸ್ಪದ ಸಾವು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಈ ಪ್ರಕರಣದಲ್ಲಿ ಪತ್ನಿ ರೇಷ್ಮಾ ಮೇಲೆ ಗಂಭೀರ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

ಶಿವಕುಮಾರ್ ಕುಟುಂಬವು ನಗರದ ವಿವಿಪುರಂ 13ನೇ ವಾರ್ಡ್‌ನ ಕುವೆಂಪು ರಸ್ತೆಯ ಶನಿಮಹಾತ್ಮಾ ದೇವಸ್ಥಾನದ ಹಿಂಭಾಗದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು. ಮಾಹಿತಿ ಪ್ರಕಾರ, ಶಿವಕುಮಾರ್ ತಡರಾತ್ರಿ ಸುಮಾರು 1:30ರ ವೇಳೆಗೆ ಮನೆಗೆ ಬಂದಿದ್ದರು. ಬೆಳಿಗ್ಗೆ 5:30ರ ಸುಮಾರಿಗೆ ಪತ್ನಿ ರೇಷ್ಮಾ, ಮೃತನ ಅಕ್ಕ ಲಕ್ಷಮ್ಮ ಅವರಿಗೆ ಕರೆ ಮಾಡಿ, “ನಿನ್ನ ತಮ್ಮನಿಗೆ ಗಾಯಗಳಾಗಿದ್ದವು. ನಾನು ನೀರು ಕುಡಿಸಿದ್ದೇನೆ, ನಂತರ ಅವರು ಸತ್ತರು. ಅದನ್ನು ಕಂಡು ನಾನು ಮೂರ್ಛೆ ಹೋಗಿದ್ದೇನೆ” ಎಂದು ತಿಳಿಸಿದ್ದಾರೆ.

ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯ ಗ್ರಾಮದ ರೇಷ್ಮಾ ಅವರನ್ನು ಶಿವಕುಮಾರ್ 17 ವರ್ಷಗಳ ಹಿಂದೆ ವಿವಾಹ ಮಾಡಿಕೊಂಡಿದ್ದರು. ದಂಪತಿಗೆ 16 ವರ್ಷದ ಮಗ ಹಾಗೂ 12 ವರ್ಷದ ಮಗಳು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿ ನಡುವೆ ನಿರಂತರ ಜಗಳಗಳು ನಡೆಯುತ್ತಿದ್ದು, ಇಬ್ಬರೂ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರೆಂದು ತಿಳಿದುಬಂದಿದೆ.

ಮೃತನ ಅಕ್ಕ ಲಕ್ಷಮ್ಮ ಅವರು, “ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಾನು ಬುದ್ಧಿ ಹೇಳಿದ್ದೆ. ಆದರೆ ರೇಷ್ಮಾ, ‘ನಿನ್ನ ತಮ್ಮ ಬಂದರೆ ಏನಾಗುತ್ತೋ ಗೊತ್ತಿಲ್ಲ’ ಎಂದು ಹೇಳಿದ್ದಾಳೆ. ಇದರಿಂದ ಏನೋ ಅನುಮಾನ ಉಂಟಾಗಿದೆ” ಎಂದು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೊಕೊ ತಜ್ಞರ ತಂಡದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ವಿಚಾರಣೆ ಮುಂದುವರಿದಿದೆ.

ಈ ಘಟನೆ ಸ್ಥಳೀಯರಲ್ಲಿ ಆಘಾತ ಉಂಟುಮಾಡಿದ್ದು, ತನಿಖೆಯಿಂದ ಹೆಚ್ಚಿನ ಸತ್ಯಾಂಶಗಳು ಹೊರಬರುವ ನಿರೀಕ್ಷೆಯಿದೆ.

ವರದಿ: ಅವಿನಾಶ್

1 thought on “ಹೆಂಡತಿ ಮಕ್ಕಳನ್ನು ಕರೆತರಲು ಹೋದವ ಅನುಮಾನಾಸ್ಪದ ಸಾವು: ಪತ್ನಿಯ ಮೇಲೆ ಅನುಮಾನ..!

Comments are closed.

error: Content is protected !!