ಮಹಾರಾಷ್ಟ್ರದಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಬ್ಬರ ಸಾವಿನ ಹಿಂದೆ ದಾರುಣ ಸತ್ಯ ಬಯಲಾಗಿದೆ. ‘ಹಠಾತ್ ಅನಾರೋಗ್ಯ’ ಎಂದು ಮುಚ್ಚಿಹಾಕಲಾಗಿದ್ದ ಪ್ರಕರಣ, ಮೂರು ವರ್ಷಗಳ ಬಳಿಕ ಕೊಲೆ ಎಂದು ಬಹಿರಂಗವಾಗಿದ್ದು, ಇದರಲ್ಲಿ ಸ್ವತಃ ಮಗಳೇ ಪ್ರಮುಖ ಆರೋಪಿ ಎಂಬುದು ಬೆಚ್ಚಿಬೀಳಿಸುವ ಸಂಗತಿ.

2023ರ ಏಪ್ರಿಲ್ 25ರಂದು ಪೊಲೀಸ್ ಅಧಿಕಾರಿ ಜಯಂತ್ ಬಲ್ಲಾವರ್ (45) ಎಂದಿನಂತೆ ಕರ್ತವ್ಯಕ್ಕೆ ತೆರಳಲು ಸಿದ್ಧರಾಗಿದ್ದರು. ಈ ವೇಳೆ ಅವರ ಪುತ್ರಿ ಆರ್ಯ ಮಿಲ್ಕ್‌ಶೇಕ್ ನೀಡಿದ್ದಳು. ಅದನ್ನು ಕುಡಿದ ಬಳಿಕ ಅವರು ಚಂದ್ರಾಪುರದ ಜಿಲ್ಲಾಧಿಕಾರಿ ಕಚೇರಿಗೆ ತಲುಪುವಷ್ಟರಲ್ಲಿ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದು ಮೃತಪಟ್ಟಿದ್ದರು. ಆಗ ಇದನ್ನು ಸಹಜ ಸಾವು ಎಂದು ಪರಿಗಣಿಸಿ ಪ್ರಕರಣವನ್ನು ಮುಚ್ಚಲಾಗಿತ್ತು.

ಆದರೆ, ಇದೀಗ ತನಿಖೆಯಲ್ಲಿ ಇದು ಪೂರ್ವಯೋಜಿತ ಕೊಲೆ ಎಂಬುದು ಸ್ಪಷ್ಟವಾಗಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರ್ಯ 2022ರಿಂದ ಆಶಿಶ್ ಶೇಡ್ಮೇಕೆ ಎಂಬ ಯುವಕನೊಂದಿಗೆ ಪ್ರೀತಿಯಲ್ಲಿದ್ದಳು. ಈ ಸಂಬಂಧಕ್ಕೆ ತಂದೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ಪ್ರೀತಿಗೆ ಅಡ್ಡಿಯಾಗಿದ್ದ ತಂದೆಯನ್ನು ದೂರ ಮಾಡಲು ಸಂಚು ರೂಪಿಸಲಾಗಿದೆ.

ಈ ಸಂಚಿನ ಭಾಗವಾಗಿ, ಆರ್ಯ ತನ್ನ ಸೋದರಸಂಬಂಧಿ ಚೈತನ್ಯ ಗೆಡಾಮ್‌ಗೆ ₹5,000 ನೀಡಿ ವಿಷ ತರಿಸಿದ್ದಳು. ಬಳಿಕ ಅದನ್ನು ಮಿಲ್ಕ್‌ಶೇಕ್‌ನಲ್ಲಿ ಬೆರೆಸಿ ತಂದೆಗೆ ನೀಡಿದ್ದಳು ಎನ್ನಲಾಗಿದೆ. ಸಾವಿನ ನಂತರ ಶವಪರೀಕ್ಷೆ ನಡೆಯದ ಕಾರಣ, ಈ ಹತ್ಯೆ ಹಲವು ವರ್ಷಗಳ ಕಾಲ ಗೂಢವಾಗಿಯೇ ಉಳಿದಿತ್ತು.

ಈ ಪ್ರಕರಣದ ಸತ್ಯ ಹೊರಬಂದಿದ್ದು, ಆರ್ಯ ಪತಿ ಆಶಿಶ್ ಶೇಡ್ಮೇಕೆ ನೀಡಿದ ಮಾಹಿತಿಯಿಂದ. ಜಯಂತ್ ಸಾವಿನ ಬಳಿಕ ಆರ್ಯ ಮತ್ತು ಆಶಿಶ್ ವಿವಾಹವಾಗಿದ್ದರು. ಆದರೆ, ಕುಟುಂಬ ಕಲಹಗಳ ಹಿನ್ನೆಲೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ, ಕಳೆದ ವಾರ ಕೋಪಗೊಂಡ ಆಶಿಶ್ ಪೊಲೀಸರಿಗೆ ದೂರು ನೀಡಿ ಸತ್ಯ ಬಿಚ್ಚಿಟ್ಟಿದ್ದಾನೆ.

ಈ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆರ್ಯ ಬಲ್ಲಾವರ್, ಆಶಿಶ್ ಶೇಡ್ಮೇಕೆ, ಚೈತನ್ಯ ಗೆಡಾಮ್ ಹಾಗೂ ವಿಷ ಸರಬರಾಜು ಮಾಡಿದ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ನಾಲ್ವರೂ ಪೊಲೀಸ್ ವಶದಲ್ಲಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.

Related News

error: Content is protected !!