ಈಶಾನ್ಯ ಚೀನಾದಲ್ಲಿ ಹೃದಯಸ್ಪರ್ಶಿ ಘಟನೆ ಒಂದಾಗಿದೆ. ಅಕ್ರಮವಾಗಿ ಸಾಗಿಸಲಾಗುತ್ತಿದ್ದ 7 ಶ್ವಾನಗಳು ವಾಹನದಿಂದ ತಪ್ಪಿಸಿಕೊಂಡು, ಸುಮಾರು 17 ಕಿಲೋಮೀಟರ್‌ ದೂರವನ್ನು ಒಟ್ಟಾಗಿ ಪ್ರಯಾಣಿಸಿ ತಮ್ಮ ಮನೆ ಸೇರಿವೆ.

ಶ್ವಾನಗಳನ್ನು ಕದ್ದು ಸಾಗಿಸುತ್ತಿದ್ದ ವಾಹನದಿಂದ ತಪ್ಪಿಸಿಕೊಂಡ ಈ ನಾಯಿಗಳು, ಪರಸ್ಪರ ಬೆಂಬಲವಾಗಿ ಒಂದಾಗಿ ಸಾಗಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಸ್ತೆ ಬದಿಯಲ್ಲಿ ಶಿಸ್ತಿನಿಂದ, ಒಗ್ಗಟ್ಟಿನಿಂದ ಸಾಗುತ್ತಿರುವ ಈ ಗುಂಪನ್ನು ಸ್ಥಳೀಯರೊಬ್ಬರು ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ.

ವಿಡಿಯೋದಲ್ಲಿ ‘ಕಾರ್ಗಿ’ ತಳಿಯ ಶ್ವಾನವು ಗುಂಪಿನ ಮುನ್ನಡೆ ವಹಿಸಿಕೊಂಡಿದ್ದು, ಇತರ ನಾಯಿಗಳನ್ನು ದಾರಿತೋರಿಸುತ್ತಿರುವುದು ಕಾಣಿಸುತ್ತದೆ. ಜೊತೆಗೆ, ‘ಗೋಲ್ಡನ್ ರಿಟ್ರೀವರ್’ ಶ್ವಾನವು ಕಾವಲುಗಾರನಂತೆ ವರ್ತಿಸುತ್ತಿದೆ. ಗಾಯಗೊಂಡಿದ್ದ ‘ಜರ್ಮನ್ ಶೆಫರ್ಡ್’ ಶ್ವಾನವು ಕುಂಟುತ್ತ ಸಾಗುತ್ತಿದ್ದರೂ, ಅದನ್ನು ಒಂಟಿಯಾಗಲು ಬಿಡದೇ, ಇತರ ನಾಯಿಗಳು ಅದರ ವೇಗಕ್ಕೆ ತಕ್ಕಂತೆ ಸಾಗಿರುವುದು ಮನಸೂರೆಗೈಯುವಂತಿದೆ.

ಈ ವಿಡಿಯೋ ವೈರಲ್ ಆದ ಬಳಿಕ ಪ್ರಾಣಿ ದಯಾ ಸಂಘಗಳು ತಕ್ಷಣ ಕಾರ್ಯಪ್ರವೃತ್ತಗೊಂಡು, ಎಲ್ಲಾ ಶ್ವಾನಗಳನ್ನು ಸುರಕ್ಷಿತವಾಗಿ ಅವುಗಳ ಮಾಲೀಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿವೆ.

error: Content is protected !!