ಉತ್ತರ ಪ್ರದೇಶದ ಸುಮೇರ್ಪುರ್ ಗ್ರಾಮದ ಮಾಜಿ ಅಧ್ಯಕ್ಷ ಮುಸ್ತಾಕ್ ಗುಲ್ಶನ್ ಅಲಿಯಾಸ್ ಮುನ್ನಾ, ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಪ್ರಕರಣ ಭೀಕರ ತಿರುವು ಪಡೆದುಕೊಂಡಿದ್ದು, ಇದೀಗ ಆತನ ಶವ ಕಾಲುವೆಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಮತ್ತು ಆಕೆಯ ಸಹೋದರನನ್ನು ಬಂಧಿಸಿದ್ದಾರೆ.
ಮುನ್ನಾಗೆ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರು ಪತ್ನಿಯರಿದ್ದರು. ಇದಲ್ಲದೆ, ಸುಮನ್ ದೇವಿ ಎಂಬ ವಿವಾಹಿತ ಮಹಿಳೆಯೊಂದಿಗೆ ಆತ ಅಕ್ರಮ ಸಂಬಂಧ ಹೊಂದಿದ್ದ. ಕೆಲಸದ ನಿಮಿತ್ತ ಗಂಡ ಊರಿನಿಂದ ದೂರವಾಗಿದ್ದ ಸಮಯದಲ್ಲಿ, ಏಕಾಂಗಿಯಾಗಿದ್ದ ಸುಮನ್ ದೇವಿಗೆ ಮುನ್ನಾ ಸಹಾಯ ಮಾಡುತ್ತಿದ್ದ. ಇದೇ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು.

ಆರಂಭದಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಸಾಗುತ್ತಿದ್ದ ಈ ಸಂಬಂಧ, ನಂತರ ಮುನ್ನಾ ಪದೇಪದೇ ಭೇಟಿಯಾಗಲು ಒತ್ತಾಯಿಸುವುದು ಹಾಗೂ ಬ್ಲ್ಯಾಕ್‌ಮೇಲ್ ಮಾಡುವುದರಿಂದ ಗಲಾಟೆಗೆ ಕಾರಣವಾಯಿತು. ಕಿರುಕುಳದಿಂದ ಬೇಸತ್ತ ಸುಮನ್ ದೇವಿ ಈ ಸಂಬಂಧಕ್ಕೆ ಅಂತ್ಯ ಹಾಕಲು ನಿರ್ಧರಿಸಿದರು.
ಮಾರ್ಚ್ 18ರಂದು ತನ್ನ ತಾಯಿಯ ಮನೆಗೆ ಮುನ್ನಾನನ್ನು ಕರೆಸಿಕೊಂಡ ಸುಮನ್, ಸಹೋದರನ ಜೊತೆಗೂಡಿ ಸಂಚು ರೂಪಿಸಿದ್ದರು. ಮನೆಗೆ ಬಂದ ಮುನ್ನಾ ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದರು.
ಹತ್ಯೆಯ ನಂತರ, ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಕಾಲುವೆಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಮುನ್ನಾ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದರು.
ತನಿಖೆ ವೇಳೆ ಮುನ್ನಾನ ಮೋಟಾರ್‌ಸೈಕಲ್ ನಿರ್ಜನ ಪ್ರದೇಶದಲ್ಲಿ ಪತ್ತೆಯಾಯಿತು. ನಂತರ ಫೋನ್ ಕಾಲ್ ರೆಕಾರ್ಡ್ ಪರಿಶೀಲಿಸಿದಾಗ ಸುಮನ್ ದೇವಿಯೊಂದಿಗೆ ಅವನ ಸಂಪರ್ಕ ಬಹಿರಂಗವಾಯಿತು. ಪೊಲೀಸರು ವಿಚಾರಣೆ ನಡೆಸಿದಾಗ ಸುಮನ್ ದೇವಿ ಅಪರಾಧ ಒಪ್ಪಿಕೊಂಡಳು.
ಮಾರ್ಚ್ 22ರಂದು ಕಾಲುವೆಯಿಂದ ಮುನ್ನಾನ ಮೃತದೇಹವನ್ನು ವಶಕ್ಕೆ ಪಡೆದ ಪೊಲೀಸರು, ಸುಮನ್ ದೇವಿ ಮತ್ತು ಆಕೆಯ ಸಹೋದರನನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಮುನ್ನಾ ಮುಂಬರುವ ಗ್ರಾಮ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ ಸಮಯದಲ್ಲೇ ಈ ಘಟನೆ ಸಂಭವಿಸಿದೆ. ಆತನಿಗೆ ಇಬ್ಬರು ಪತ್ನಿಯರು ಮತ್ತು ಒಟ್ಟು 18 ಮಕ್ಕಳು ಇದ್ದು, ಅವರನ್ನೆಲ್ಲ ಬಿಟ್ಟು ದುರ್ಘಟನೆಯಿಂದ ಸಾವನ್ನಪ್ಪಿರುವುದು ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ.
