ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹಾಗೂ ನಿರ್ದೇಶಕ ಪ್ರೇಮ್ ಸಾರಥ್ಯದ ಬಹುನಿರೀಕ್ಷಿತ ‘ಕೆಡಿ: ದಿ ಡೆವಿಲ್’ ಚಿತ್ರಕ್ಕೆ ಹೊಸ ತೊಂದರೆ ಎದುರಾಗಿದೆ. ಚಿತ್ರದ ಮೊದಲ ಹಾಡಾದ ‘ಸರ್ಕೆ ಚುನಾರ್’ (ಕನ್ನಡದಲ್ಲಿ ‘ಸರ್ಸೆ ಸೆರಗ ಸರ್ಸೆ’) ಅತಿಯಾದ ಅಶ್ಲೀಲತೆ ಮತ್ತು ದ್ವಂದ್ವಾರ್ಥದ ಸಾಹಿತ್ಯ ಹೊಂದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತುರ್ತು ಗಮನ ಹರಿಸಿದೆ.

ಸಾರ್ವಜನಿಕ ನೈತಿಕತೆ ಮತ್ತು ಸಭ್ಯತೆಯ ಮಾನದಂಡಗಳನ್ನು ಮೀರುತ್ತಿದೆ ಎಂಬ ವಿವಾದ ಹೆಚ್ಚಾದ ಹಿನ್ನೆಲೆ, ಈ ಹಾಡನ್ನು ತಕ್ಷಣ ಪರಿಶೀಲಿಸುವಂತೆ ಕೇಂದ್ರವು ಸೆನ್ಸಾರ್ ಮಂಡಳಿಗೆ (CBFC) ಸೂಚನೆ ನೀಡಿದೆ. ನಿಯಮ ಉಲ್ಲಂಘನೆ ದೃಢಪಟ್ಟಲ್ಲಿ, ಹಾಡನ್ನು ಎಲ್ಲಾ ಡಿಜಿಟಲ್ ವೇದಿಕೆಗಳಿಂದ ತೆಗೆದುಹಾಕಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.

ಈ ಹಾಡು ಬಿಡುಗಡೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ವಿಶೇಷವಾಗಿ ಧ್ರುವ ಸರ್ಜಾ ಮತ್ತು ನೋರಾ ಫತೇಹಿ ಕಾಣಿಸಿಕೊಂಡಿರುವ ದೃಶ್ಯಗಳು ಹಾಗೂ ನೃತ್ಯ ಸಂಯೋಜನೆ ಅತಿರೇಕದ ಅಶ್ಲೀಲತೆಯಿಂದ ಕೂಡಿದೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದೂರುಗಳು ದಾಖಲಾಗಿದ್ದವು.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿರುವ ಈ ಚಿತ್ರಕ್ಕೆ ಈ ಬೆಳವಣಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಸೆನ್ಸಾರ್ ಮಂಡಳಿ ಹಾಡನ್ನು ತೆಗೆದುಹಾಕಲು ತೀರ್ಮಾನಿಸಿದರೆ, ಚಿತ್ರತಂಡವು ಅದನ್ನು ಮರುಸಂಪಾದನೆ ಮಾಡುವುದು ಅಥವಾ ಸಂಪೂರ್ಣವಾಗಿ ಕೈಬಿಡುವುದು ಅನಿವಾರ್ಯವಾಗಬಹುದು.

error: Content is protected !!