ಮೈಸೂರು: ನಗರದ ಎನ್.ಆರ್. ಠಾಣಾ ವ್ಯಾಪ್ತಿಯಲ್ಲಿರುವ ಬನ್ನಿಮಂಟಪದ ಬಳಿ ಗ್ಯಾರೇಜ್ವೊಂದರಲ್ಲಿ ನಡೆಯುತ್ತಿದ್ದ ಮಾದಕ ವಸ್ತು ತಯಾರಿಕಾ ಘಟಕ ಪತ್ತೆಯಾಗಿರುವ ಕರ್ತವ್ಯ ಲೋಪ ಆರೋಪದ ಮೇಲೆ ಎನ್ಆರ್ ಠಾಣೆಯ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್ ತಳವಾರ್ ಅವರನ್ನು ಅಮಾನತು ಮಾಡಲಾಗಿದೆ.
ಬನ್ನಿಮಂಟಪದ ರಿಂಗ್ರಸ್ತೆ ಬಳಿಯ ಗ್ಯಾರೇಜ್ನಲ್ಲಿ ಡ್ರಗ್ಸ್ ತಯಾರಿಕೆ ಜೋರಾಗಿದ್ದು, ಈ ಬಗ್ಗೆ ಠಾಣೆಯ ಪೊಲೀಸ್ ಅಧಿಕಾರಿಗೆ ಮಾಹಿತಿ ಇಲ್ಲದಿರುವುದು ಗಂಭೀರ ಲೋಪವೆಂದು ಅಧಿಕಾರಿಗಳು ತಿಳಿದುಕೊಂಡಿದ್ದಾರೆ. ಪರಿಣಾಮವಾಗಿ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಳಿಸಿ, ಅವರ ಸ್ಥಳಕ್ಕೆ ಮೈಸೂರು ಸಿಸಿಬಿ ವಿಭಾಗದ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ಅವರನ್ನು ನಿಯೋಜಿಸಲಾಗಿದೆ.
ಈ ಡ್ರಗ್ಸ್ ಕಳ್ಳಸಾಗಾಣೆಯ ಬಗ್ಗೆ ಮಹಾರಾಷ್ಟ್ರ ಪೊಲೀಸರು ಮಾಹಿತಿ ಪಡೆದು ಮೈಸೂರಿಗೆ ಬಂದು ಭಾನುವಾರ ದಾಳಿ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ಆರು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಘಟಕದಿಂದ ಸುಮಾರು 10 ಕೆಜಿ ಎಂಡಿಎಂಎ ಮಾದಕ ವಸ್ತು ಹಾಗೂ ಇನ್ನೂ ಅನೇಕ ಪ್ರಮಾಣದ ದ್ರವರೂಪದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಈ ಡ್ರಗ್ಸ್ ಘಟಕವು ಐಟಿ ಪಾರ್ಕ್, ವಿದ್ಯಾರ್ಥಿಗಳ ವಸತಿ ಪ್ರದೇಶಗಳಿಗೆ ಸಮೀಪವಿರುವುದರಿಂದ, ಡ್ರಗ್ಸ್ ವಿತರಣೆಯ ದೊಡ್ಡ ಜಾಲವೊಂದೇ ಇಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಸಂಬಂಧ ತನಿಖೆ ಮುಂದುವರಿದಿದ್ದು, ಇನ್ನಷ್ಟು ಆರೋಪಿಗಳ ಬಂಧನ ಸಾಧ್ಯತೆ ಇದೆ.
