ಉತ್ತರ ಪ್ರದೇಶದಲ್ಲಿ ವಿದೇಶಿ ಹಣದ ಮೂಲಕ ನಡೆಯುತ್ತಿದ್ದ ಅಕ್ರಮ ಮತಾಂತರದ ಭಾರೀ ಜಾಲವೊಂದು ಭೇದಿಸಲಾಗಿದೆ. ಈ ಕೃತ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಚಂಗೂರ್ ಬಾಬಾ ಅಲಿಯಾಸ್ ಜಮಾಲುದ್ದೀನ್ ಮತ್ತು ನೀತು ರೋಹ್ರಾ ಅಲಿಯಾಸ್ ನಸ್ರೀನ್ ಎಂಬವರನ್ನು ಯುಪಿ ಎಸ್‌ಟಿಎಫ್ ಅಧಿಕಾರಿಗಳು ಬಂಧಿಸಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಈ ಜಾಲವು ವಿದೇಶಿ ನಿಧಿಗಳ ಸಹಾಯದಿಂದ ಸಂಚಾಲಿತವಾಗುತ್ತಿದ್ದು, ಮುಸ್ಲಿಂ ಯುವಕರಿಗೆ ನಕಲಿ ಹಿಂದೂ ಹೆಸರಿನ ಗುರುತು ನೀಡಿ ಅವರನ್ನು ಹಿಂದೂ ಯುವತಿಯರನ್ನು ಪ್ರೀತಿಗೆ ಸೆಳೆಯುವಂತೆ ಪ್ರೇರೇಪಿಸಲಾಗುತ್ತಿತ್ತು. ಈ ಮೂಲಕ ಮತಾಂತರಕ್ಕೆ ಪ್ರೇರಣೆ ನೀಡುವ ಸುಗಮ ಮಾರ್ಗವನ್ನು ರೂಪಿಸಲಾಗಿತ್ತು. ಪ್ರೇಮ ಸಂಬಂಧಗಳ ಮೂಲಕ ಯುವತಿಯರನ್ನು ತಪ್ಪು ದಾರಿಗೆ ಸೆಳೆಯಲಾಗುತ್ತಿದ್ದು, ಹಣದ ಆಮಿಷ ಕೂಡಾ ನೀಡಲಾಗುತ್ತಿತ್ತೆಂದು ವರದಿಯಾಗಿದೆ.
ಎಸ್‌ಟಿಎಫ್ ಮುಖ್ಯಸ್ಥ ಅಮಿತಾಭ್ ಯಶ್ ನೀಡಿದ ಮಾಹಿತಿಯ ಪ್ರಕಾರ, ಜಮಾಲುದ್ದೀನ್ ತನ್ನನ್ನು “ಹಜರತ್ ಜಮಾಲುದ್ದೀನ್ ಪೀರ್ ಬಾಬಾ” ಎಂದು ಬಿಂಬಿಸಿ, ಬಲರಾಂಪುರ್ ಜಿಲ್ಲೆಯ ಉತ್ತರೌಲಾ ಪಟ್ಟಣವನ್ನು ತನ್ನ ಕ್ರಿಯಾಶೀಲತೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದ. ಅಲ್ಲಿಂದಲೇ ದೊಡ್ಡ ಮಟ್ಟದ ಮತಾಂತರ ಚಟುವಟಿಕೆಗೆ ನೇತೃತ್ವ ನೀಡುತ್ತಿದ್ದನು.
ಈ ಜಾಲದ ಹಿಂದೆ ದುಬಾರಿ ಹಣದ ಲಾಭದ ಚಟುವಟಿಕೆಗಳೂ ನಡೆದಿದೆ ಎನ್ನಲಾಗಿದೆ. ಪ್ರತಿ ಯುವತಿಯ ಮತಾಂತರಕ್ಕೆ ಸ್ಪಷ್ಟವಾದ ಹಣಕಾಸು ಧೋರಣೆ ಇತ್ತು ಎಂಬ ಸಂಗತಿಯೂ ತನಿಖೆಯಲ್ಲಿ ಹೊರಬಿದ್ದಿದೆ. ಬ್ರಾಹ್ಮಣ, ರಜಪೂತ ಅಥವಾ ಸಿಖ್ ಯುವತಿಯರ ಮತಾಂತರಕ್ಕೆ ₹16 ಲಕ್ಷ, ಒಬಿಸಿ ಯುವತಿಯರಿಗೆ ₹12 ಲಕ್ಷ ಹಾಗೂ ಇತರ ಹಿಂದುಳಿದ ಸಮುದಾಯಗಳ ಯುವತಿಯರ ಮತಾಂತರಕ್ಕೆ ₹10 ಲಕ್ಷವರೆಗೂ ಹಣ ನೀಡಲಾಗುತ್ತಿತ್ತಂತೆ.
ಇನ್ನು ಈ ಅಕ್ರಮ ಚಟುವಟಿಕೆಗೆ ವಿದೇಶದಿಂದ ಸುಮಾರು ₹100 ಕೋಟಿ ಮೊತ್ತದ ಹಣದ ವರ್ಗಾವಣೆ ನಡೆದಿದೆ ಎಂಬ ಶಂಕೆಯಿದೆ. ಪ್ರಕರಣದ ಕುರಿತಾಗಿ ಎಸ್‌ಟಿಎಫ್ ಇನ್ನಷ್ಟು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ಮುಂದುವರಿಸಿದೆ.
ಈ ಪ್ರಕರಣವು ಮತ್ತಷ್ಟು ರಾಜಕೀಯ ಹಾಗೂ ಸಾಮಾಜಿಕ ಹಿನ್ನಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಯಿದೆ. ಪೊಲೀಸರು ಸಂಪೂರ್ಣ ಜಾಲವನ್ನು ನಿಖರವಾಗಿ ಬಹಿರಂಗಪಡಿಸಲು ಮುಂದಾಗಿದ್ದಾರೆ.
