ಬೆಂಗಳೂರು: ಆನ್‌ಲೈನ್ ಬೈಕ್ ಟ್ಯಾಕ್ಸಿ ಸೇವೆಗಳ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಮೂಡುವಂತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಪಿಡೋ ಬೈಕ್ ಪ್ರಯಾಣದ ವೇಳೆ ಚಾಲಕನ ಅಜಾಗರೂಕತೆ ಮತ್ತು ಅತಿವೇಗದ ಚಾಲನೆಯಿಂದ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಜೀವನವೇ ಸಂಪೂರ್ಣ ಬದಲಾಗಿದೆ. ಇದೀಗ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವ ಸಂತ್ರಸ್ತೆ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

ಅಪಘಾತ ಹೇಗೆ ಸಂಭವಿಸಿತು?

ಸಾಹಿತ್ಯ ಹಾಗೂ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಸಾನಿಕೃಷ್ಣ ಅವರು ಬೆಂಗಳೂರಿನ ದೊಮ್ಮಲೂರಿನಲ್ಲಿ ಉದ್ಯೋಗದಲ್ಲಿದ್ದರು. ಜೂನ್ 17, 2026ರಂದು ಬೈರಸಂದ್ರದಿಂದ ದೊಮ್ಮಲೂರಿಗೆ ತೆರಳಲು ರಾಪಿಡೋ ಬೈಕ್ ಸೇವೆಯನ್ನು ಬುಕ್ ಮಾಡಿಕೊಂಡಿದ್ದರು.

ಪ್ರಯಾಣದ ವೇಳೆ ಚಾಲಕ ಅತಿವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದನ್ನು ಗಮನಿಸಿದ ಸಾನಿಕೃಷ್ಣ, “ನನಗೆ ತುರ್ತು ಇಲ್ಲ, ದಯವಿಟ್ಟು ನಿಧಾನವಾಗಿ ಚಾಲನೆ ಮಾಡಿ” ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಚಾಲಕ ಪ್ರಯಾಣಿಕರ ಮನವಿಯನ್ನು ಲೆಕ್ಕಿಸದೆ ವೇಗವಾಗಿ ಬೈಕ್ ಚಲಾಯಿಸಿದ್ದಾನೆ ಎನ್ನಲಾಗಿದೆ.

ಬಾಗ್ಮನೆ ಟೆಕ್ ಪಾರ್ಕ್ ಬಳಿ ಭೀಕರ ದುರಂತ

ಬಾಗ್ಮನೆ ಟೆಕ್ ಪಾರ್ಕ್ ಸಮೀಪ ರಸ್ತೆಯಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್ ಅನ್ನು ಓವರ್‌ಟೇಕ್ ಮಾಡಲು ಯತ್ನಿಸಿದ ವೇಳೆ ಚಾಲಕ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮ ಬೈಕ್ ರಸ್ತೆ ಮೇಲೆ ಮಗುಚಿ ಬಿದ್ದಿದ್ದು, ಸಾನಿಕೃಷ್ಣ ಟ್ರ್ಯಾಕ್ಟರ್ ಚಕ್ರದಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತೀವ್ರ ಗಾಯಗಳು, 20 ಲಕ್ಷಕ್ಕೂ ಅಧಿಕ ಚಿಕಿತ್ಸಾ ವೆಚ್ಚ

ಅಪಘಾತದಲ್ಲಿ ಸಾನಿಕೃಷ್ಣ ಅವರ ಮುಖಕ್ಕೆ ತೀವ್ರ ಪೆಟ್ಟಾಗಿದ್ದು, ಒಂಬತ್ತು ಪಕ್ಕೆಲುಬುಗಳು ಮುರಿದಿವೆ. ಆಂತರಿಕ ರಕ್ತಸ್ರಾವದಿಂದ ಗುಲ್ಮವನ್ನು ಶಸ್ತ್ರಚಿಕಿತ್ಸೆ ಮೂಲಕ ತೆರವುಗೊಳಿಸಬೇಕಾಯಿತು. ಹಲ್ಲುಗಳು ಮುರಿದಿದ್ದು, ಮುಖದ ಪುನರ್‌ನಿರ್ಮಾಣಕ್ಕಾಗಿ ಹಲವು ಪ್ಲಾಸ್ಟಿಕ್ ಸರ್ಜರಿಗಳನ್ನು ನಡೆಸಲಾಗಿದೆ.

ಬೆಂಗಳೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೇರಳಕ್ಕೆ ಸ್ಥಳಾಂತರಿಸಲಾಗಿದ್ದು, ಇದುವರೆಗೆ ವೈದ್ಯಕೀಯ ವೆಚ್ಚ 20 ಲಕ್ಷ ರೂಪಾಯಿಗೂ ಅಧಿಕವಾಗಿದೆ.

ನ್ಯಾಯಕ್ಕಾಗಿ ಸಂತ್ರಸ್ತೆಯ ಹೋರಾಟ

ಅಪಘಾತದಿಂದ ಬದುಕುಳಿದಿರುವ ಸಾನಿಕೃಷ್ಣ, ತನಗೆ ಸೂಕ್ತ ಪರಿಹಾರ ನೀಡುವಂತೆ ರಾಪಿಡೋ ಸಂಸ್ಥೆಗೆ ಕಾನೂನು ನೋಟಿಸ್ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ಕಂಪನಿಯಿಂದ ಯಾವುದೇ ಸಮರ್ಪಕ ಸ್ಪಂದನೆ ದೊರೆತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಘಟನೆ ಬಳಿಕ ಆನ್‌ಲೈನ್ ಬೈಕ್ ಟ್ಯಾಕ್ಸಿ ಸೇವೆಗಳ ಸುರಕ್ಷತೆ, ಚಾಲಕರ ಜವಾಬ್ದಾರಿ ಹಾಗೂ ಕಂಪನಿಗಳ ಹೊಣೆಗಾರಿಕೆ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆ ಆರಂಭವಾಗಿದೆ. ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕೆಂಬ ಒತ್ತಾಯವೂ ಹೆಚ್ಚಾಗಿದೆ.

Related News

error: Content is protected !!