ಕೇರಳದ ಅಲೆಪ್ಪಿ ಜಿಲ್ಲೆಯ ಚೆರ್ತಲಾದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್‌ನಲ್ಲಿ ಶ್ರೀಕೃಷ್ಣನ ಚಿತ್ರದ ಪಕ್ಕದಲ್ಲಿ ಚಿಕನ್ ಮಂದಿ (ಚಿಕನ್ ಮತ್ತು ರೈಸ್) ಖಾದ್ಯವನ್ನು ಪ್ರದರ್ಶಿಸಿದ್ದ ಹಿನ್ನೆಲೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದುದಾಗಿ ಆರೋಪಿಸಿ ರೆಸ್ಟೋರೆಂಟ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಲಯಾಳಿಗಳ ಹೊಸ ವರ್ಷದ ಹಬ್ಬವಾದ ವಿಷು ಅಂಗವಾಗಿ, ಚೆರ್ತಲಾದ ಮನೋರಮಾ ಜಂಕ್ಷನ್ ಬಳಿ ಇರುವ ‘ಮೆಹರ್ ಮಂತಿ ಆಯಂಡ್ ಗ್ರಿಲ್ಸ್’ ರೆಸ್ಟೋರೆಂಟ್ ಹೆಸರಿನಲ್ಲಿ ಈ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪೋಸ್ಟರ್‌ನಲ್ಲಿ ಶ್ರೀಕೃಷ್ಣನ ಚಿತ್ರ ಮುಂದೆ ಗ್ರಿಲ್ಡ್ ಚಿಕನ್ ಹಾಗೂ ಮಂದಿ ರೈಸ್ ಇರುವ ತಟ್ಟೆಯನ್ನು ಚಿತ್ರಿಸಲಾಗಿದ್ದು, ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಯಿತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ವಕೀಲ ಎಂ.ವಿ. ಬಿಜು ದೂರು ದಾಖಲಿಸಿದ್ದರು.

ಈ ದೂರಿನ ಆಧಾರದಲ್ಲಿ ಪೊಲೀಸರು ರೆಸ್ಟೋರೆಂಟ್ ಮಾಲೀಕ ಅರ್ಷಾದ್ ಅವರನ್ನು ಬಂಧಿಸಿದ್ದಾರೆ. ಕೋಮು ಶಾಂತಿ ಕದಡುವ ಉದ್ದೇಶ ಹಾಗೂ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅಪರಾಧಕ್ಕೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ರೆಸ್ಟೋರೆಂಟ್‌ನ ವ್ಯವಸ್ಥಾಪಕ ಪಾಲುದಾರ ಶಮೀರ್ ಇನ್‌ಸ್ಟಾಗ್ರಾಮ್ ಮೂಲಕ ಕ್ಷಮೆಯಾಚಿಸಿದ್ದಾರೆ. “ಈ ಪೋಸ್ಟರ್ ಉದ್ದೇಶಪೂರ್ವಕವಾಗಿ ಹಂಚಲಾಗಿಲ್ಲ. ಖಾಸಗಿ ಗ್ರೂಪ್‌ನಲ್ಲಿ ಹರಿದಾಡುತ್ತಿದ್ದ ಚಿತ್ರವನ್ನು ತೆಗೆದುಹಾಕಲು ಪ್ರಯತ್ನಿಸಿದ್ದೇವೆ. ಆದರೆ ಸಂವಹನದ ಕೊರತೆಯಿಂದ ಅದು ವೈರಲ್ ಆಯಿತು. ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ,” ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕೇರಳದ ಮುಸ್ಲಿಂ ನಾಯಕ ಉಸ್ತಾದ್ ಅನ್ಸಾರಿ ಸುಹ್ರಿ ಅವರು ಫೇಸ್‌ಬುಕ್ ವಿಡಿಯೋ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ. “ಶುಭಾಶಯ ಕೋರಬೇಕೆಂದಿಲ್ಲದಿದ್ದರೂ, ಆ ನೆಪದಲ್ಲಿ ಕೋಮುದ್ವೇಷ ಸೃಷ್ಟಿಸುವುದು ತಪ್ಪು. ಇಂತಹ ಘಟನೆಗಳು ಸಮಾಜದ ಶಾಂತಿಗೆ ಧಕ್ಕೆ ತರುತ್ತವೆ,” ಎಂದು ಅವರು ಎಚ್ಚರಿಸಿದರು.

“ಒಂದು ಸಮುದಾಯ ಗೌರವಿಸುವ ದೈವದ ಮುಂದೆ ಮಾಂಸಾಹಾರವನ್ನು ಚಿತ್ರಿಸುವುದು ತಪ್ಪು ಎಂಬ ಅರಿವು ಎಲ್ಲರಲ್ಲಿರಬೇಕು. ಇಂತಹ ಕೃತ್ಯಗಳು ಅನಾವಶ್ಯಕ ದ್ವೇಷಕ್ಕೆ ಕಾರಣವಾಗುತ್ತವೆ,” ಎಂದು ಅವರು ಹೇಳಿದರು.

ಇದೇ ವೇಳೆ ಯಾವುದೇ ಧಾರ್ಮಿಕ ನಿಂದನೆ ನಡೆದರೂ ಅದನ್ನು ಸಮಾನವಾಗಿ ಖಂಡಿಸಬೇಕು ಎಂದು ಅವರು ಒತ್ತಿ ಹೇಳಿದರು.

Related News

error: Content is protected !!