ಮುಕ್ತಾಯವಾಗದ ಆನ್‌ಲೈನ್ ಹಾಗೂ ಮನೆ ಆಧಾರಿತ ಉದ್ಯೋಗಗಳ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳಿಗೆ ಮತ್ತೊಂದು ಆಘಾತಕಾರಿ ಸೇರ್ಪಡೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ. “ಮನೆಯಲ್ಲೇ ಕುಳಿತು ಊದುಬತ್ತಿ ಹಾಗೂ ಕರ್ಪೂರ ಪ್ಯಾಕಿಂಗ್ ಮಾಡಿ ತಿಂಗಳಿಗೆ ಸಾವಿರಾರು ರೂಪಾಯಿ ಸಂಪಾದಿಸಿ” ಎಂಬ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿರುವ ಪ್ರಕರಣ ಇದೀಗ ಪೊಲೀಸರ ತನಿಖೆಗೆ ಒಳಪಟ್ಟಿದೆ.

ಕೋಲಾರದ ಪಾಲಸಂದ್ರ ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಶ್ರೀ ಕಾಳಿಕಾದೇವಿ ಎಂಟರ್‌ಪ್ರೈಸಸ್’ ಎಂಬ ಸಂಸ್ಥೆ, ಕಡಿಮೆ ಹೂಡಿಕೆಗೆ ಹೆಚ್ಚಿನ ಲಾಭ ಹಾಗೂ ಮಾಸಿಕ ಆದಾಯ ನೀಡುವುದಾಗಿ ಭರವಸೆ ನೀಡಿ ನೂರಾರು ಕುಟುಂಬಗಳನ್ನು ತನ್ನ ಬಲೆಗೆ ಸೆಳೆದಿತ್ತು. ₹1 ಲಕ್ಷ ಹೂಡಿಕೆ ಮಾಡಿದರೆ ತಿಂಗಳಿಗೆ ₹22 ಸಾವಿರದವರೆಗೆ ಆದಾಯ ಸಿಗುತ್ತದೆ ಎಂದು ನಂಬಿಸಿದ್ದ ಸಂಸ್ಥೆ, ಆರಂಭದಲ್ಲಿ ಕೆಲವರಿಗೆ ಹಣ ನೀಡಿ ವಿಶ್ವಾಸ ಮೂಡಿಸಿತ್ತು. ಇದರಿಂದ ಮತ್ತಷ್ಟು ಜನ ಹೆಚ್ಚಿನ ಮೊತ್ತ ಹೂಡಿಕೆ ಮಾಡಿದ್ದರು.

ಸಂತ್ರಸ್ತರ ಮಾಹಿತಿ ಪ್ರಕಾರ, ಕೆಲವರು ₹10 ಸಾವಿರದಿಂದ ಆರಂಭಿಸಿ ₹15 ಲಕ್ಷದವರೆಗೆ ಹಣ ಹೂಡಿಕೆ ಮಾಡಿದ್ದಾರೆ. ಕೋಲಾರ ಹಾಗೂ ಸುತ್ತಮುತ್ತಲಿನ ಸುಮಾರು 2,500ಕ್ಕೂ ಹೆಚ್ಚು ಜನರು ಈ ವಂಚನೆಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಒಟ್ಟಾರೆ ₹5 ಕೋಟಿಗೂ ಅಧಿಕ ಮೊತ್ತದ ವಂಚನೆ ನಡೆದಿರುವ ಸಾಧ್ಯತೆ ಇದೆ.

ಕಳೆದ ಕೆಲವು ತಿಂಗಳುಗಳಿಂದ ಲಾಭಾಂಶವೂ ಬಂದಿಲ್ಲ, ಹೂಡಿಕೆ ಮಾಡಿದ ಮೂಲಧನವೂ ವಾಪಸ್ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ಹೂಡಿಕೆದಾರರು ಸಂಸ್ಥೆಯ ಕಚೇರಿಗೆ ತೆರಳಿದಾಗ ಸರಿಯಾದ ಉತ್ತರ ಸಿಗದೆ ಮೋಸವಾಗಿರುವುದು ಗೊತ್ತಾಗಿದೆ. ಬಳಿಕ ಸಂತ್ರಸ್ತರು ಒಟ್ಟಾಗಿ ಕೋಲಾರದ ಗಲ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಸಂಸ್ಥೆಯ ಮ್ಯಾನೇಜರ್ ರಮ್ಯಾ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಹಿಂದೆ ಇರುವ ಪ್ರಮುಖ ಆರೋಪಿಗಳು ಹಾಗೂ ಜಾಲದ ಇತರ ಸದಸ್ಯರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಈ ವಂಚನೆ ಕೇವಲ ಕೋಲಾರಕ್ಕೆ ಸೀಮಿತವಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದ್ದು, ಚಿತ್ರದುರ್ಗ ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ಇದೇ ಮಾದರಿಯ ಆಮಿಷದ ಮೂಲಕ ಜನರನ್ನು ವಂಚಿಸಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ವಿಸ್ತರಿಸಿದ್ದಾರೆ.

ಪೊಲೀಸರ ಎಚ್ಚರಿಕೆ: ಕಡಿಮೆ ಹೂಡಿಕೆಗೆ ಅಧಿಕ ಲಾಭ, ಮನೆಯಲ್ಲೇ ಕೆಲಸ ಮಾಡಿ ಹೆಚ್ಚಿನ ಆದಾಯ ಎಂಬ ರೀತಿಯ ಆಮಿಷದ ಯೋಜನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಯಾವುದೇ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಅದರ ನೋಂದಣಿ, ಅಧಿಕೃತತೆ ಹಾಗೂ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು. ಕಷ್ಟಪಟ್ಟು ಗಳಿಸಿದ ಹಣವನ್ನು ಇಂತಹ ನಕಲಿ ಕಂಪನಿಗಳ ಕೈಗೆ ಒಪ್ಪಿಸಿ ಮೋಸ ಹೋಗದಂತೆ ಪೊಲೀಸರು ಮನವಿ ಮಾಡಿದ್ದಾರೆ.

Related News

error: Content is protected !!