ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಂಗಂಪೇಟೆ ಮಂಡಲದ ವೆಂಕಟಾಪುರಂ ಪ್ರಾಥಮಿಕ ಶಾಲೆಯಲ್ಲಿ ನಡೆದ ಒಂದು ಘಟನೆ ವಿವಾದಕ್ಕೆ ಕಾರಣವಾಗಿದೆ. ಶಾಲೆಯ ಶಿಕ್ಷಕಿ ಡಿ. ಸುಶೀಲಾ ತಮ್ಮ ವಿದ್ಯಾರ್ಥಿಗಳನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಶಾಲೆಗೆ ಸ್ವಂತ ಕಾರಿನಲ್ಲಿ ಆಗಮಿಸಿದ್ದ ಸುಶೀಲಾ, ತಮ್ಮ ವಾಹನದ ಮೇಲೆ ಕೂಡಿದ್ದ ದೂಳನ್ನು ತೊಳೆಯಲು ವಿದ್ಯಾರ್ಥಿಗಳನ್ನು ಕೇಳಿಕೊಂಡರು. ಶಿಕ್ಷಕಿಯ ಆದೇಶ ಪಾಲಿಸಲು ಕೆಲವು ವಿದ್ಯಾರ್ಥಿನಿಯರು ಕಾರು ಸ್ವಚ್ಛಗೊಳಿಸಿದರು. ಈ ಸಂದರ್ಭ, ಆ ಕ್ಷಣಗಳನ್ನು ಅಲ್ಲಿದ್ದ ಇತರ ಶಿಕ್ಷಕರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದು, ವೀಡಿಯೋವೈರಲ್ ಆಗಿದೆ.
ವಿಡಿಯೋ ವೈರಲ್ ಆದ ನಂತರ, ಈ ಕುರಿತು ಶಾಲಾ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಅಧಿಕಾರಿಗಳು ತಕ್ಷಣವೇ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳನ್ನು ವಿಚಾರಿಸಿದರು. ವಿಚಾರಣೆ ವೇಳೆ ವಿದ್ಯಾರ್ಥಿಗಳು, ಶಿಕ್ಷಕಿ ಅವರ ಮೇಲೆ ಒತ್ತಡ ಹೇರಿದ್ದು, ಅವರ ಮಾತಿಗೆ ಕಿವಿಗೊಡದಿದ್ದರೆ ಪರೀಕ್ಷೆಯಲ್ಲಿ ಫೇಲ್ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ, ಶಾಲೆಯ ಸಮಯದಲ್ಲಿ ವೈಯಕ್ತಿಕ ಕೆಲಸಗಳನ್ನೂ ಮಾಡಿಸುತ್ತಿದ್ದರು ಎಂಬ ಆರೋಪವೂ ಕೇಳಿ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿತ ಅಧಿಕಾರಿಗಳು ಶಿಕ್ಷಕಿಯನ್ನು ಅಮಾನತು ಮಾಡಿ ಕ್ರಮ ಕೈಗೊಂಡಿದ್ದಾರೆ. ಈ ಘಟನೆಯಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಶಿಕ್ಷಕಿಯ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಾಗ್ದಾಳಿ ನಡೆಯುತ್ತಿದೆ.
ಶಿಕ್ಷಕರ ಮುಖ್ಯ ಜವಾಬ್ದಾರಿ ಮಕ್ಕಳಿಗೆ ಪಾಠ ಕಲಿಸುವುದು, ಅವರ ಭವಿಷ್ಯ ರೂಪಿಸುವುದು. ಆದರೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳುವ ಪ್ರವೃತ್ತಿ ಶೈಕ್ಷಣಿಕ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ.
