ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಖಚೋಡ್ ಪಟ್ಟಣದಲ್ಲಿ ಅಂತರ್ಜಾತಿ ವಿವಾಹದ ಹಿನ್ನೆಲೆ ಕುಟುಂಬವೊಂದು ತಮ್ಮ ಜೀವಂತ ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿರುವ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕುಟುಂಬದ ಸದಸ್ಯರ ಪ್ರಕಾರ, ಕೋಮಲ್ ಪ್ರಜಾಪತ್ ತಮ್ಮ ಇಚ್ಛೆಗೆ ವಿರುದ್ಧವಾಗಿ ಬೇರೆ ಜಾತಿಯ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಮದುವೆ ನಿರ್ಧಾರವನ್ನು ಬದಲಾಯಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಆಕೆ ಒಪ್ಪಲಿಲ್ಲ ಎಂದು ಕುಟುಂಬ ಆರೋಪಿಸಿದೆ. ಈ ವಿಚಾರ ಪೊಲೀಸ್ ಠಾಣೆಯವರೆಗೂ ತಲುಪಿದ್ದು, ಅಲ್ಲಿ ಕೋಮಲ್ ತಮ್ಮ ಪೋಷಕರು ಹಾಗೂ ಕುಟುಂಬ ಸದಸ್ಯರನ್ನು ಗುರುತಿಸಲು ನಿರಾಕರಿಸಿದ್ದಾರೆ ಎಂದು ಕುಟುಂಬ ಹೇಳಿದೆ.

ಈ ಬೆಳವಣಿಗೆಯ ಬಳಿಕ ಕುಟುಂಬವು ಸಂಬಂಧಿಕರು ಹಾಗೂ ಸಮುದಾಯದವರನ್ನು ಮನೆಗೆ ಆಹ್ವಾನಿಸಿ, ಕೋಮಲ್ ಅವರ ಭಾವಚಿತ್ರವನ್ನು ಇಟ್ಟು ‘ಗೋರ್ನಿ’ ಎಂದು ಕರೆಯಲಾಗುವ ಸಾಂಕೇತಿಕ ಅಂತ್ಯಕ್ರಿಯೆಯ ಆಚರಣೆ ನಡೆಸಿತು. ಕೆಲವು ಸಮುದಾಯಗಳಲ್ಲಿ ಕುಟುಂಬದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡ ಸದಸ್ಯರೊಂದಿಗೆ ಸಾಮಾಜಿಕ ಸಂಬಂಧ ಕಡಿದುಕೊಳ್ಳುವುದನ್ನು ಸೂಚಿಸಲು ಇಂತಹ ಆಚರಣೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.

ಕೋಮಲ್ ಅವರ ಸಹೋದರ ಸೋನು ಪ್ರಜಾಪತ್, “ಇನ್ನು ಮುಂದೆ ಆಕೆ ನಮ್ಮ ಕುಟುಂಬದ ಸದಸ್ಯಳಲ್ಲ. ಕುಟುಂಬ ಮತ್ತು ಆಸ್ತಿಯ ಮೇಲೂ ಯಾವುದೇ ಹಕ್ಕಿಲ್ಲ ಎಂದು ನಾವು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.

ಇದೇ ವೇಳೆ, ಕುಟುಂಬದವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಇತರ ಯುವತಿಯರಿಗೆ ಸಂದೇಶ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಅಂತರ್ಜಾತಿ ವಿವಾಹ, ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಕುಟುಂಬದ ಹಕ್ಕುಗಳ ಕುರಿತು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Related News

error: Content is protected !!