ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು 25 ವರ್ಷದ ಅಂಬಿಕಾ ಹಾಗೂ ಅವರ ಪುತ್ರ ಆರಾಧ್ಯ ಎಂದು ಗುರುತಿಸಲಾಗಿದೆ. ಅಂಬಿಕಾ ಅವರಿಗೆ ಮೂರು ವರ್ಷಗಳ ಹಿಂದೆ ವೀರಭದ್ರಪ್ಪ ಅವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ಒಂದೂವರೆ ವರ್ಷದ ಮಗು ಇತ್ತು. ಅಲ್ಲದೆ, ಅಂಬಿಕಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ.

ಜೂನ್ 23ರಂದು ಅಂಬಿಕಾ ಮನೆಯಿಂದ ಹೊರಟಿದ್ದು, ಸಂಜೆವರೆಗೂ ಮನೆಗೆ ಮರಳದ ಹಿನ್ನೆಲೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದರು. ಹುಡುಕಾಟದ ವೇಳೆ ಗ್ರಾಮದ ಹೊರವಲಯದಲ್ಲಿರುವ ತೆರೆದ ಬಾವಿಯ ಸಮೀಪ ಅಂಬಿಕಾ ಅವರ ಚಪ್ಪಲಿಗಳು ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಬಾವಿಯೊಳಗೆ ಪರಿಶೀಲನೆ ನಡೆಸಿದಾಗ ತಾಯಿ ಮತ್ತು ಮಗುವಿನ ಮೃತದೇಹಗಳು ಪತ್ತೆಯಾಗಿವೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಈ ದುರ್ಘಟನೆಯಲ್ಲಿ ಗರ್ಭದಲ್ಲಿದ್ದ ಮಗು ಸೇರಿ ಒಂದೇ ಕುಟುಂಬದ ಮೂರು ಜೀವಗಳು ಕಳೆದುಹೋಗಿರುವುದು ಗ್ರಾಮದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಿಸಿದೆ.

Related News

error: Content is protected !!