
ಗೌರಿಬಿದನೂರು: ನಗರದ ಹೃದಯಭಾಗವಾದ ಬಿ.ಎಚ್. ರಸ್ತೆಯಲ್ಲಿ ಮತ್ತೊಮ್ಮೆ ಸರಣಿ ಕಳ್ಳತನ ನಡೆದಿದ್ದು, ವ್ಯಾಪಾರಿಗಳಲ್ಲಿ ಆತಂಕ ಮನೆ ಮಾಡಿದೆ. ನ್ಯಾಷನಲ್ ಕಾಲೇಜು ಸಮೀಪದ ಹಜರತ್ ಜಲಾಲ್ ಶಾ ಕಾಂಪ್ಲೆಕ್ಸ್‌ನಲ್ಲಿರುವ ಮೂರು ಅಂಗಡಿಗಳ ಬೀಗ ಮುರಿದು ದುಷ್ಕರ್ಮಿಗಳು ಕಳ್ಳತನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಕಳ್ಳರು ಕಾಂಪ್ಲೆಕ್ಸ್‌ನಲ್ಲಿದ್ದ ದಿನಸಿ ಅಂಗಡಿ ಸೇರಿದಂತೆ ಮೂರು ಅಂಗಡಿಗಳ ಶಟರ್‌ಗಳನ್ನು ಎತ್ತಿ ಒಳನುಗ್ಗಿದ್ದು, ದಿನಸಿ ಅಂಗಡಿಯ ಕ್ಯಾಶ್ ಬಾಕ್ಸ್‌ನಲ್ಲಿದ್ದ ಸುಮಾರು ₹6,000 ನಗದು ಹಾಗೂ ಮಿಕ್ಸ್ಚರ್ ಪ್ಯಾಕೆಟ್‌ಗಳು, ಮೈದಾ ಹಿಟ್ಟಿನ ಪ್ಯಾಕೆಟ್‌ಗಳು ಸೇರಿದಂತೆ ಕೆಲವು ವ್ಯಾಪಾರ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳಿಗ್ಗೆ ಅಂಗಡಿ ತೆರೆಯಲು ಬಂದ ಮಾಲೀಕರು ಕಳ್ಳತನ ನಡೆದಿರುವುದನ್ನು ಗಮನಿಸಿ ತಕ್ಷಣವೇ ಗೌರಿಬಿದನೂರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಕುರಿತು ಮಾತನಾಡಿದ ಅಂಗಡಿ ಮಾಲೀಕರು, “ಇದೇ ರೀತಿಯ ಕಳ್ಳತನ ಮೂರು ತಿಂಗಳ ಹಿಂದೆಯೂ ನಡೆದಿತ್ತು. ಆಗಲೂ ಪೊಲೀಸರಿಗೆ ದೂರು ನೀಡಿದ್ದೆವು. ಆದರೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಿಲ್ಲ. ಈಗ ಮತ್ತೆ ಅದೇ ರೀತಿಯ ಕಳ್ಳತನ ನಡೆದಿದೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ವ್ಯಾಪಾರ ನಡೆಸುವುದೇ ಭಯದ ವಾತಾವರಣದಲ್ಲಿ ನಡೆಯುತ್ತಿದೆ. ಕಳ್ಳರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.
ಇನ್ನೊಬ್ಬ ವ್ಯಾಪಾರಿ ಅಮೀರ್ ಸುಹೇಲ್ ಮಾತನಾಡಿ, “ನಮ್ಮ ಅಂಗಡಿಯ ಪಕ್ಕದಲ್ಲೇ ಮತ್ತೆ ಕಳ್ಳತನವಾಗಿದೆ. ಇದೇ ಪ್ರದೇಶದಲ್ಲಿ ಈ ಹಿಂದೆ ಕೂಡ ಇಂತಹ ಘಟನೆ ನಡೆದಿತ್ತು. ದೂರು ನೀಡಿದಾಗ ಪೊಲೀಸರು ಬಂದು ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿ ಹೋಗುತ್ತಾರೆ. ಆದರೆ ಕ್ಯಾಮೆರಾ ಇರುವ ಪ್ರದೇಶಗಳಲ್ಲಿಯೂ ಕಳ್ಳತನಗಳು ನಡೆಯುತ್ತಿವೆ. ರಾತ್ರಿ ವೇಳೆ ಪೊಲೀಸ್ ಬೀಟ್ ಹೆಚ್ಚಿಸಿ, ಕಳ್ಳತನಗಳನ್ನು ತಡೆಗಟ್ಟಲು ಶಾಶ್ವತ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.
ಬಿ.ಎಚ್. ರಸ್ತೆ ಗೌರಿಬಿದನೂರಿನ ಅತ್ಯಂತ ಜನನಿಬಿಡ ಮತ್ತು ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಒಂದಾಗಿದ್ದು, ಇಂತಹ ಪ್ರದೇಶದಲ್ಲೇ ಪದೇ ಪದೇ ಕಳ್ಳತನಗಳು ನಡೆಯುತ್ತಿರುವುದು ಸಾರ್ವಜನಿಕರು ಹಾಗೂ ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ. ವ್ಯಾಪಾರಿಗಳು ಸಂಜೆ ಅಂಗಡಿ ಮುಚ್ಚಿ ಮನೆಗೆ ತೆರಳುವುದಕ್ಕೂ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಸ್ಥಳೀಯ ವ್ಯಾಪಾರಿಗಳು ನಗರದಲ್ಲಿ ರಾತ್ರಿ ಪೊಲೀಸ್ ಗಸ್ತು ಹೆಚ್ಚಿಸುವುದು, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸುವುದು ಹಾಗೂ ಸರಣಿ ಕಳ್ಳತನಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ವರದಿ: ಅವಿನಾಶ್






