ಮುಂಡಗೋಡ: ತಾಲೂಕಿನ ಅಂಗಡಿಗಳಿಗೆ ಭೇಟಿ ನೀಡಿ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆದು ಹಣ, ಒಡವೆ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿರುವ ಶಂಕಿತ ಇಬ್ಬರು ವ್ಯಕ್ತಿಗಳ ಕುರಿತು ಮುಂಡಗೋಡ ಪೊಲೀಸರು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಫೋಟೋದಲ್ಲಿರುವ ಇಬ್ಬರು ಶಂಕಿತರು ವಿವಿಧ ಅಂಗಡಿಗಳಿಗೆ ತೆರಳಿ ನಾಣ್ಯಗಳನ್ನು ನೀಡಿ ಚಿಲ್ಲರೆ ಅಥವಾ ದೊಡ್ಡ ಮೊತ್ತದ ನೋಟುಗಳನ್ನು ಕೇಳುವುದು, “ಡಿಎಲ್ (DL) ಸೀರೀಸ್ ನೋಟು ಬೇಕು”, “ಹೊಸ ಅಂಗಡಿ ಆರಂಭಿಸುತ್ತಿದ್ದೇವೆ” ಎಂಬಂತಹ ನೆಪಗಳನ್ನು ಹೇಳುವುದು ಸೇರಿದಂತೆ ವಿವಿಧ ರೀತಿಯ ಸಂಭಾಷಣೆಯಲ್ಲಿ ಅಂಗಡಿ ಸಿಬ್ಬಂದಿಯನ್ನು ತೊಡಗಿಸಿಕೊಳ್ಳುತ್ತಾರೆ. ಈ ವೇಳೆ ಅವರ ಗಮನವನ್ನು ಬೇರೆಡೆ ಸೆಳೆದು ಕೌಂಟರ್‌ನಲ್ಲಿರುವ ಹಣ, ಒಡವೆ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂತಹ ಘಟನೆಗಳನ್ನು ತಡೆಯುವ ಉದ್ದೇಶದಿಂದ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುವ ವ್ಯಕ್ತಿಗಳು ಅಥವಾ ಫೋಟೋದಲ್ಲಿರುವ ಶಂಕಿತರು ಎಲ್ಲಿಯಾದರೂ ಕಂಡುಬಂದರೆ ತಕ್ಷಣ ಮುಂಡಗೋಡ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಅಥವಾ ಪೊಲೀಸ್ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಪೊಲೀಸರ ಸಲಹೆ: ಅಂಗಡಿಗಳಿಗೆ ಬರುವ ಅಪರಿಚಿತ ವ್ಯಕ್ತಿಗಳ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹಣ, ಒಡವೆ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಬೇಕು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ವಿಳಂಬ ಮಾಡದೆ ಪೊಲೀಸರಿಗೆ ಮಾಹಿತಿ ನೀಡಿ ಕಳವು ಪ್ರಕರಣಗಳನ್ನು ತಡೆಗಟ್ಟುವಲ್ಲಿ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Related News

error: Content is protected !!