ಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ಕುಟುಂಬ ಕಲಹದ ಹಿನ್ನೆಲೆ ನಡೆದಿರುವ ಭೀಕರ ಘಟನೆ ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ವೈದ್ಯೆಯೊಬ್ಬರು ತಮ್ಮ ವೈದ್ಯ ಪತಿಯನ್ನು ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದು, ಬಳಿಕ ಎಂಟು ವರ್ಷದ ಮಗನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸಮಯಪ್ರಜ್ಞೆಯಿಂದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ದುರ್ಘಟನೆ ಧಾರವಾಡದ ಕೆವಿವಿ ರಸ್ತೆಯ ಬಾರಾಕೊಟ್ರಿ ಬಡಾವಣೆಯಲ್ಲಿರುವ ‘ರಂಕಾ ಕೆಸ್ಟೆಲ್ಲೋ’ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಚಿರಾಯು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ. ಕಿರಣ್ ಹೊನ್ನಣ್ಣವರ್ (45) ಮೃತಪಟ್ಟವರು. ಅವರ ಪತ್ನಿ ಡಾ. ಪ್ರಿಯಾಂಕಾ ಕೂಡ ವೈದ್ಯೆಯಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಗೆ ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.
ಪತಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿಯು ಮತ್ತೊಂದು ಕೋಣೆಯಲ್ಲಿದ್ದ ತನ್ನ ಎಂಟು ವರ್ಷದ ಮಗ ನೇಹಿತ್ ಮೇಲೂ ಚಾಕುವಿನಿಂದ ದಾಳಿ ನಡೆಸಿದ್ದಾಳೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದ ಮಗು ಜೀವಕ್ಕಾಗಿ ಹೋರಾಡುತ್ತಿದ್ದರೂ, ಆರೋಪಿ ಅಲ್ಲೇ ಕುಳಿತು ಮೊಬೈಲ್ ಬಳಸುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಪರಿಶೀಲನೆ ನಡೆಸುವ ವೇಳೆ ಮಗು ಇನ್ನೂ ಉಸಿರಾಡುತ್ತಿರುವುದನ್ನು ಗಮನಿಸಿದರು. ಕೂಡಲೇ ಮಗುವನ್ನು ತಮ್ಮ ಕೈಯಲ್ಲಿ ಹೊತ್ತು ಕೆಳಗೆ ತಂದು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ದೊರಕುವಂತೆ ಮಾಡಿದರು. ಅವರ ಸಮಯೋಚಿತ ಕ್ರಮದಿಂದ ಮಗುವಿನ ಜೀವ ಉಳಿಸುವಲ್ಲಿ ಮಹತ್ವದ ಪ್ರಯತ್ನ ನಡೆದಿದೆ.
ಈ ವೇಳೆ ಸ್ಥಳದಲ್ಲಿದ್ದ ಕೆಲ ನೆರೆಹೊರೆಯವರು ಹಾಗೂ ವೈದ್ಯಕೀಯ ಹಿನ್ನೆಲೆಯವರಿದ್ದರೂ ಗಾಯಾಳು ಮಗುವಿಗೆ ತಕ್ಷಣ ನೆರವಾಗದ ವಿಚಾರಕ್ಕೆ ಪೊಲೀಸ್ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿ, ಜೀವ ಉಳಿಸುವ ಪ್ರಯತ್ನ ಮಾಡಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡರು. ಸದ್ಯ ಮಗು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಡಾ. ಕಿರಣ್ ಅವರ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದು, ಸಹೋದರಿಯರ ಆಕ್ರಂದನ ಮನಕಲಕುವಂತಿತ್ತು. ವಿದ್ಯಾಗಿರಿ ಹಾಗೂ ಉಪನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಪ್ರಿಯಾಂಕಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೌಟುಂಬಿಕ ಕಲಹವೇ ಈ ಕೃತ್ಯಕ್ಕೆ ಕಾರಣವೇ ಅಥವಾ ಬೇರೆ ಯಾವುದೇ ಹಿನ್ನೆಲೆ ಇದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ವಿದ್ಯಾವಂತರ ಕುಟುಂಬದಲ್ಲಿ ನಡೆದ ಈ ಭೀಕರ ಘಟನೆ ಧಾರವಾಡದ ಜನರಲ್ಲಿ ತೀವ್ರ ಆಘಾತ ಮತ್ತು ಆತಂಕಕ್ಕೆ ಕಾರಣವಾಗಿದೆ.
