ಪ್ರೀತಿ ಮಾಡುವುದಾಗಿ ನಂಬಿಸಿ ಯುವತಿಯ ಖಾಸಗಿ ವಿಡಿಯೋವನ್ನು ದಾಖಲಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಆರೋಪದ ಮೇಲೆ ಸುಶಾಂತ್ ಪೂಜಾರಿ ಹಾಗೂ ಆತನ ಸಹೋದರಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಯುವತಿ ನೀಡಿದ ದೂರಿನ ಪ್ರಕಾರ, ಸುಮಾರು ಆರು ತಿಂಗಳ ಹಿಂದೆ Instagram ಮೂಲಕ ಸುಶಾಂತ್ ಪೂಜಾರಿಯ ಪರಿಚಯವಾಗಿತ್ತು. ಆತನು ತಾನು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಾತ್ಕಾಲಿಕವಾಗಿ ಊರಿಗೆ ಬಂದಿದ್ದೇನೆಂದು ಹೇಳಿಕೊಂಡಿದ್ದ.

ಪರಿಚಯ ಮುಂದುವರಿದಂತೆ ಇಬ್ಬರ ಮಧ್ಯೆ ಪ್ರೀತಿ ಬೆಳೆದು, ಮದುವೆಯಾಗುವುದಾಗಿ ನಿರ್ಧರಿಸಿದ್ದರು. ಈ ನಡುವೆ, ಮದುವೆಯ ಭರವಸೆ ನೀಡಿದ ಸುಶಾಂತ್, ಯುವತಿಗೆ ಖಾಸಗಿ ವಿಡಿಯೋ ಕಳುಹಿಸಲು ಹಾಗೂ ವಿಡಿಯೋ ಕಾಲ್‌ನಲ್ಲಿ ನಗ್ನವಾಗಿ ಕಾಣಿಸಿಕೊಳ್ಳಲು ಒತ್ತಾಯಿಸಿದ್ದಾನೆ. ವಿಶ್ವಾಸದಿಂದ ಯುವತಿ ಸ್ನಾನ ಮಾಡುವ ಸಂದರ್ಭದಲ್ಲೇ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂದರ್ಭವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಂಡ ಆರೋಪಿಯು ಬಳಿಕ ಅದನ್ನು ವಾಟ್ಸಾಪ್ ಮೂಲಕ ಇತರರಿಗೆ ಹಂಚಿದ್ದಾನೆ. ಈ ಕೃತ್ಯಕ್ಕೆ ಆತನ ಸಹೋದರಿಯೂ ಸಹಕರಿಸಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ.

ಯುವತಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

error: Content is protected !!