ಕೊಲ್ಲಂ: ನಾಗರಿಕ ಸಮಾಜವೇ ಬೆಚ್ಚಿಬೀಳುವಂತಹ ಪ್ರಕರಣವೊಂದು ಕೇರಳದ ಕೊಲ್ಲಂನಲ್ಲಿ ಬೆಳಕಿಗೆ ಬಂದಿದೆ. ಪತ್ನಿಯ ಖಾಸಗಿ ವಿಡಿಯೋಗಳನ್ನು ಅಶ್ಲೀಲ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡಿದ್ದಲ್ಲದೆ, ನಾಲ್ಕು ವರ್ಷದ ಸ್ವಂತ ಮಗಳ ಮುಂದೆಯೇ ಲೈಂಗಿಕ ಕೃತ್ಯ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮಯ್ಯನಾಡ್ ಮೂಲದ ಆರೋಪಿ ಕಳೆದ ನಾಲ್ಕು ವರ್ಷಗಳಿಂದ ಪತ್ನಿ ಹಾಗೂ ಮಗಳೊಂದಿಗೆ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದ. ಈ ವೇಳೆ ಪತ್ನಿಯ ಖಾಸಗಿ ವಿಡಿಯೋಗಳು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಹರಿದಾಡುತ್ತಿರುವುದು ಆಕೆಯ ಸ್ನೇಹಿತರ ಗಮನಕ್ಕೆ ಬಂದಿದೆ. ಬಳಿಕ ಪತಿಯ ಮೊಬೈಲ್ ಪರಿಶೀಲಿಸಿದಾಗ, ನಾಲ್ಕು ವರ್ಷದ ಮಗಳ ಸಮ್ಮುಖದಲ್ಲೇ ಲೈಂಗಿಕ ಕೃತ್ಯ ಎಸಗಿರುವ ವಿಡಿಯೋ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಗೆ ಹಲ್ಲೆ ಆರೋಪ

ಘಟನೆ ಬಳಿಕ ದಂಪತಿ ಕೇರಳಕ್ಕೆ ಮರಳಿದ್ದರು. ಆರೋಪಿಗೆ ಮೂರು ದಿನಗಳ ಕಾಲ ಕೌನ್ಸೆಲಿಂಗ್ ನೀಡಲಾಗಿತ್ತು. ಆದರೆ ಕೌನ್ಸೆಲಿಂಗ್ ನಂತರವೂ ಆತ ಮತ್ತೊಂದು ಖಾಸಗಿ ವಿಡಿಯೋ ಚಿತ್ರೀಕರಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪತ್ನಿ ಪ್ರಶ್ನಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಮಹಿಳೆ ಚಿಕಿತ್ಸೆ ಪಡೆದ ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.

ವೈಫ್-ಸ್ವಾಪಿಂಗ್‌ಗೆ ಒತ್ತಾಯದ ಆರೋಪ

ಮೊಬೈಲ್‌ನಲ್ಲಿದ್ದ ವಿಡಿಯೋಗಳನ್ನು ಪರಿಶೀಲಿಸಿದ ವೇಳೆ ನಾಲ್ಕು ವರ್ಷದ ಮಗುವಿನ ಎದುರೇ ಲೈಂಗಿಕ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ಇದಲ್ಲದೆ, ಪತ್ನಿಯನ್ನು ಇತರ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಆರೋಪಿ ಒತ್ತಾಯಿಸಿದ್ದಾನೆ ಎಂದು ದೂರುದಾರರ ಪರ ವಕೀಲರು ಆರೋಪಿಸಿದ್ದಾರೆ.

ತನಿಖೆಯಲ್ಲಿ ಲೋಪದ ಆರೋಪ

ಪ್ರಕರಣದ ಆರಂಭಿಕ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಕೇರಳ ಹೈಕೋರ್ಟ್‌ ಮೊರೆ ಹೋಗಲು ಸಿದ್ಧತೆ ನಡೆಸಿದ ಬಳಿಕ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ದೂರುದಾರರ ಪರ ವಕೀಲರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಆರೋಪಗಳ ಸಂಪೂರ್ಣ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಬೇಕಿದೆ.

Related News

error: Content is protected !!