ಗೌರಿಬಿದನೂರು: ನಗರದ ಬೈಪಾಸ್ ರಸ್ತೆಯಲ್ಲಿರುವ ತೇಜಸ್ ಕಂಫರ್ಟ್ ಲಾಡ್ಜ್‌ನಲ್ಲಿ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಒಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ಬುಧವಾರ ಬೆಳಕಿಗೆ ಬಂದಿದ್ದು, ನಗರದಲ್ಲಿ ಆತಂಕ ಮೂಡಿಸಿದೆ.
ಮೃತರನ್ನು ದೊಡ್ಡಬಳ್ಳಾಪುರ ಮೂಲದ ಮಧುತೇಜ್ ಎಂದು ಗುರುತಿಸಲಾಗಿದೆ. ಅವರು ದೀಪಾಳ್ಯ ಎಸ್‌ಬಿಐ ಶಾಖೆಯಲ್ಲಿ ಕಳೆದ ಒಂದು ವರ್ಷದಿಂದ ಬ್ಯಾಂಕ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ಮಧುತೇಜ್ ಅವರು ಆಗಸ್ಟ್ 11ರ ರಾತ್ರಿ ಸುಮಾರು 9.30ರ ವೇಳೆಗೆ ಗೌರಿಬಿದನೂರು ಬೈಪಾಸ್ ರಸ್ತೆಯಲ್ಲಿರುವ ತೇಜಸ್ ಕಂಫರ್ಟ್ ಲಾಡ್ಜ್‌ಗೆ ಆಗಮಿಸಿದ್ದರು. ಲಾಡ್ಜ್‌ನಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದ ಅವರು, ಮರುದಿನ ಬೆಳಗ್ಗೆ ತೆರಳುವುದಾಗಿ ಸಿಬ್ಬಂದಿಗೆ ತಿಳಿಸಿದ್ದರು ಎನ್ನಲಾಗಿದೆ.
ಆದರೆ ಮರುದಿನ ಸಂಜೆ ಸುಮಾರು 6 ಗಂಟೆಯಾದರೂ ಕೊಠಡಿಯಿಂದ ಯಾವುದೇ ಚಲನವಲನ ಕಂಡುಬರದ ಹಿನ್ನೆಲೆಯಲ್ಲಿ ಲಾಡ್ಜ್ ಸಿಬ್ಬಂದಿಗೆ ಅನುಮಾನ ಮೂಡಿದೆ. ಹಲವು ಬಾರಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಲಾಡ್ಜ್ ಸಿಬ್ಬಂದಿ ಬಾಗಿಲು ತೆರೆದಾಗ, ಮಧುತೇಜ್ ಅವರು ಕೊಠಡಿಯೊಳಗೆ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗೌರಿಬಿದನೂರು ಸರ್ಕಲ್ ಇನ್ಸ್‌ಪೆಕ್ಟರ್ ಅಂಜನ್ ಕುಮಾರ್ ಹಾಗೂ ನಗರ ಸಬ್‌ಇನ್ಸ್‌ಪೆಕ್ಟರ್ ವರಲಕ್ಷ್ಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಧುತೇಜ್ ಅವರ ಸಾವಿಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಅವರು ಲಾಡ್ಜ್‌ಗೆ ಆಗಮಿಸಿದ ಸಮಯ, ಕೊಠಡಿಗೆ ಪ್ರವೇಶಿಸಿದ ಸಂದರ್ಭ ಸೇರಿದಂತೆ ವಿವಿಧ ಮಾಹಿತಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅವರ ವೈಯಕ್ತಿಕ ಹಾಗೂ ವೃತ್ತಿಜೀವನಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಮಧುತೇಜ್ ಅವರಿಗೆ ಉತ್ತಮ ಉದ್ಯೋಗವಿದ್ದು, ಇಬ್ಬರು ಮಕ್ಕಳ ತಂದೆಯಾಗಿದ್ದರು ಎನ್ನಲಾಗಿದೆ. ಹೀಗಾಗಿ ಅವರು ಇಂತಹ ದುರಂತ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬ ಪ್ರಶ್ನೆ ಕುಟುಂಬಸ್ಥರು ಹಾಗೂ ಸಾರ್ವಜನಿಕರಲ್ಲಿ ಮೂಡಿದೆ.
ವೈಯಕ್ತಿಕ ಸಮಸ್ಯೆ, ಕೌಟುಂಬಿಕ ವಿಚಾರ ಅಥವಾ ವೃತ್ತಿಪರ ಒತ್ತಡ ಸೇರಿದಂತೆ ಯಾವುದೇ ಕಾರಣಗಳಿದ್ದವೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ಘಟನೆಯ ಹಿಂದಿರುವ ನಿಖರ ಕಾರಣ ತಿಳಿದುಬರಲಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕುತ್ತಿದ್ದಾರೆ.
ವರದಿ: ಅವಿನಾಶ್
ಚಿನ್ನಾಭರಣ ದೋಚಿ ವೃದ್ಧೆಯ ಹತ್ಯೆ; ಕೃತ್ಯಕ್ಕೆ ಬಳಸಿದ ಬೈಕ್ ಸೇರಿದಂತೆ ಚಿನ್ನಾಭರಣ ವಶ ಮುಂಡಗೋಡ: ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…
ವ್ಯವಹಾರದ ವೈಮನಸ್ಸಿಗೆ ಸುಪಾರಿ ಹತ್ಯೆಯ ರೂಪ; ಮುಂಗಡವಾಗಿ ₹15 ಲಕ್ಷ ಪಾವತಿ – ಧರ್ಮಸ್ಥಳದಲ್ಲಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳ ಬಂಧನ…
ವ್ಯೂವ್ ಪಾಯಿಂಟ್‌ಗಳನ್ನೇ ಆಕ್ರಮಿಸಿದ ಅಂಗಡಿಗಳು – ಪ್ರವಾಸಿಗರಿಗೆ ವಾಹನ ನಿಲುಗಡೆ ಸಮಸ್ಯೆ, ಪರಿಸರ ಮಾಲಿನ್ಯದ ಆತಂಕ ಚಿಕ್ಕಮಗಳೂರು: ರಾಜ್ಯದ ಅತ್ಯಂತ…
ಬೆಂಗಳೂರು: ಮದ್ಯಪಾನ ಮಾಡಿ ಕಾರು ಚಲಾಯಿಸುವಾಗ ಮನೆಯೊಂದರ ಗೋಡೆಗೆ ಡಿಕ್ಕಿ ಹೊಡೆದು, ಸ್ಥಳಕ್ಕೆ ಬಂದ ಸಂಚಾರಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗೇ ಕಪಾಳಮೋಕ್ಷ…
ರಾಂಚಿ: ಜೈಲಿನೊಳಗೆ ಮಹಿಳಾ ಕೈದಿಯೊಬ್ಬರು ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ಹೋಟ್‌ವಾರ್ ಕೇಂದ್ರ ಕಾರಾಗೃಹದಲ್ಲಿ ಬೆಳಕಿಗೆ ಬಂದಿದೆ. ಶಿಕ್ಷೆ ಅನುಭವಿಸುತ್ತಿದ್ದ…
ಛತ್ತೀಸ್‌ಗಢ: ಮೋಹಕ ರೂಪದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಪ್ರೀತಿಯ ಬಲೆಗೆ ಬಿದ್ದ ಹೋಟೆಲ್ ಉದ್ಯಮಿಯೊಬ್ಬರು ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವ ಆರೋಪ…