ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಟೂರ್ನಿ ಅಂತಿಮ ಹಂತ ತಲುಪಿದ್ದು, ನಾಳೆ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಈ ಬಾರಿಯ ಕ್ರಿಕೆಟ್ ಹಬ್ಬಕ್ಕೆ ತೆರೆ ಬೀಳಲಿದೆ. ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಗುಜರಾತ್ ಟೈಟನ್ಸ್ ನಡುವೆ ನಡೆಯಲಿರುವ ಈ ಮಹಾ ಹಣಾಹಣಿಯತ್ತ ಇಡೀ ಕ್ರಿಕೆಟ್ ಜಗತ್ತು ಕಣ್ಣಿಟ್ಟಿದೆ.
ಆದರೆ ಫೈನಲ್ ಪಂದ್ಯದ ಸಂಭ್ರಮದ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದು ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಬೆಂಬಲಿಸಿದ್ದ ಯುವತಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರದ ಬೆದರಿಕೆ ಹಾಕಿದ ಆರೋಪದ ಮೇಲೆ ಆರ್ಸಿಬಿ ಅಭಿಮಾನಿಯೊಬ್ಬನ ವಿರುದ್ಧ ಸೈಬರ್ ಕ್ರೈಂ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.
ಪ್ಲೇಆಫ್ ಹಂತದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಮೇಲೆ ಹಲವು ತಂಡಗಳ ಅಭಿಮಾನಿಗಳು ಗಮನಹರಿಸಿದ್ದರು. ಕಾರಣ, ಎಲಿಮಿನೇಟರ್ ಹಾಗೂ ಕ್ವಾಲಿಫಯರ್ ಹಂತಗಳಿಂದಲೇ ಫೈನಲ್ ಪ್ರವೇಶಿಸಿ ಟ್ರೋಫಿ ಗೆದ್ದ ಇತಿಹಾಸ ಆ ತಂಡಕ್ಕಿದೆ. ಅದರಲ್ಲೂ ಪ್ರಮುಖ ಪಂದ್ಯಗಳಲ್ಲಿ ಆರ್ಸಿಬಿಗೆ ಸೋಲುಣಿಸಿದ ಹಳೆಯ ದಾಖಲೆಗಳು ಬೆಂಗಳೂರು ಅಭಿಮಾನಿಗಳಲ್ಲಿ ವಿಶೇಷ ಆತಂಕ ಹುಟ್ಟಿಸಿದ್ದವು.
ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೈದರಾಬಾದ್ ತಂಡ ಸೋತು ಟೂರ್ನಿಯಿಂದ ಹೊರಬಿದ್ದ ಕೂಡಲೇ, ಹಲವು ಆರ್ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆ ನಡೆಸಿದ್ದರು. ಇದೇ ವೇಳೆ ಹೈದರಾಬಾದ್ ತಂಡವನ್ನು ಬೆಂಬಲಿಸಿದ್ದ ತೆಲುಗು ಯುವತಿಯೊಬ್ಬಳ ಹಳೆಯ ವಿಡಿಯೋ ಮತ್ತೆ ವೈರಲ್ ಆಗತೊಡಗಿತು.
ಟೂರ್ನಿಯ ಆರಂಭದಲ್ಲಿ ಹೈದರಾಬಾದ್ ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದಾಗ, ಹಲವರು ತಂಡವನ್ನು ಟೀಕಿಸಿದ್ದರು. ಆದರೆ ನಂತರ ತಂಡ ಪುಟಿದೇಳಿ ಗೆಲುವಿನ ಹಾದಿ ಹಿಡಿದಾಗ, ತನ್ನ ನೆಚ್ಚಿನ ತಂಡದ ಮೇಲಿನ ವಿಶ್ವಾಸ ವ್ಯಕ್ತಪಡಿಸಿದ್ದ ಯುವತಿ ವಿಡಿಯೋವೊಂದರಲ್ಲಿ “ಈ ಬಾರಿ ಕಪ್ ನಮ್ಮದೇ” ಎಂದು ಹೇಳಿದ್ದಳು. ಆ ವಿಡಿಯೋವನ್ನು ಹೈದರಾಬಾದ್ ಅಭಿಮಾನಿಗಳು ವ್ಯಾಪಕವಾಗಿ ಹಂಚಿಕೊಂಡಿದ್ದರು.
ಆದರೆ ಹೈದರಾಬಾದ್ ತಂಡ ಟೂರ್ನಿಯಿಂದ ಹೊರಬಿದ್ದ ನಂತರ, ಅದೇ ವಿಡಿಯೋವನ್ನು ಕೆಲ ಆರ್ಸಿಬಿ ಅಭಿಮಾನಿಗಳು ಟ್ರೋಲ್ ಮಾಡಲು ಬಳಸಲು ಆರಂಭಿಸಿದರು. ಈ ವೇಳೆ ಸಂಜು ಎಂಬ ಹೆಸರಿನ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿ, ಯುವತಿಯ ವಿರುದ್ಧ ಅತ್ಯಾಚಾರದ ಬೆದರಿಕೆ ಇರುವ ರೀತಿಯಲ್ಲಿ ಮಾತನಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
RCB ass hole fan not about the particular RCB fan ani highlight chestadledh but what was his intention to say that to do rape on road why!? she is just a fan girl who expressed her feelings towards her favourite franchise! but this not the way to react on her @KTRBRS @CPHydCity pic.twitter.com/hGRxZjPNog
— ESHWAR (@eshward3727) May 29, 2026
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೇವಲ ಹೈದರಾಬಾದ್ ಅಭಿಮಾನಿಗಳು ಮಾತ್ರವಲ್ಲದೆ, ವಿವಿಧ ತಂಡಗಳ ಕ್ರಿಕೆಟ್ ಪ್ರೇಮಿಗಳು ಹಾಗೂ ಸಾರ್ವಜನಿಕರು ಕೂಡ ಈ ವರ್ತನೆಯನ್ನು ಖಂಡಿಸಿದ್ದಾರೆ. ಘಟನೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ನೆಟ್ಟಿಗರು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಕ್ರೀಡೆ ಎಂದರೆ ಸ್ಪರ್ಧೆ ಮತ್ತು ಮನರಂಜನೆ. ಆದರೆ ಅಭಿಮಾನ ಎಂಬ ಹೆಸರಿನಲ್ಲಿ ಮಹಿಳೆಯರ ವಿರುದ್ಧ ಅಸಭ್ಯ ಭಾಷೆ ಬಳಕೆ ಮಾಡುವುದು ಅಥವಾ ಬೆದರಿಕೆ ಹಾಕುವುದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಇಂತಹ ಅತಿರೇಕದ ವರ್ತನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
