
ರಾಯಚೂರು: ಪ್ರೀತಿಯ ಮಾತು ನಂಬಿ ಊರಿಗೆ ವಾಪಸ್ ಬಂದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಹಳೆಯ ಪ್ರೇಯಸಿಯ ಫೋನ್ ಕರೆ ಬಳಿಕ ಬೆಂಗಳೂರಿನಿಂದ ಊರಿಗೆ ಬಂದಿದ್ದ ಯುವಕ, ಕೆಲವೇ ದಿನಗಳಲ್ಲಿ ಗದ್ದೆಯೊಂದರಲ್ಲಿ ರಕ್ತಸಿಕ್ತ ಶವವಾಗಿ ಪತ್ತೆಯಾಗಿದ್ದಾನೆ. ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಮದ ರಮೇಶ್ ಎಂಬಾತ ಅದೇ ಗ್ರಾಮದ ದೇವಮ್ಮ ಎಂಬಾಕೆಯೊಂದಿಗೆ ಸುಮಾರು ಎರಡು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರ ದೇವಮ್ಮಳ ಕುಟುಂಬಸ್ಥರಿಗೆ ತಿಳಿದ ಬಳಿಕ ಇಬ್ಬರ ನಡುವೆ ಗಲಾಟೆ ನಡೆದಿದ್ದು, ರಮೇಶ್ ಮೇಲೆ ಹಲ್ಲೆಯೂ ನಡೆದಿತ್ತು ಎನ್ನಲಾಗಿದೆ.
ಮಗನ ಜೀವಕ್ಕೆ ಅಪಾಯವಿದೆ ಎಂದು ಆತಂಕಗೊಂಡಿದ್ದ ರಮೇಶ್ನ ಪೋಷಕರು ಆತನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಕೆಲಸಕ್ಕೆ ಸೇರಿಸಿದ್ದರು. ಹೀಗಾಗಿ ರಮೇಶ್ ಕಳೆದ ಕೆಲ ಸಮಯದಿಂದ ಬೆಂಗಳೂರಿನಲ್ಲೇ ವಾಸವಾಗಿದ್ದ.
ಆದರೆ ಬೆಂಗಳೂರಿಗೆ ಹೋದ ಬಳಿಕವೂ ದೇವಮ್ಮ ಹಾಗೂ ರಮೇಶ್ ನಡುವಿನ ಸಂಪರ್ಕ ಕಡಿತಗೊಂಡಿರಲಿಲ್ಲ ಎನ್ನಲಾಗಿದೆ. ಇತ್ತೀಚೆಗೆ ದೇವಮ್ಮ ಫೋನ್ ಮಾಡಿ ರಮೇಶ್ನೊಂದಿಗೆ ಮಾತನಾಡಿ, ಊರಿಗೆ ಬರುವಂತೆ ಹೇಳಿದ್ದಾಳೆ ಎನ್ನಲಾಗಿದೆ. ಆಕೆಯ ಮಾತನ್ನು ನಂಬಿದ ರಮೇಶ್ ಬೆಂಗಳೂರಿನಿಂದ ನಕ್ಕುಂದಿ ಗ್ರಾಮಕ್ಕೆ ವಾಪಸ್ ಬಂದಿದ್ದಾನೆ.
ಊರಿಗೆ ಬಂದ ಬಳಿಕ ರಮೇಶ್ ಎರಡ್ಮೂರು ದಿನ ದೇವಮ್ಮಳೊಂದಿಗೆ ಓಡಾಡಿಕೊಂಡಿದ್ದ ಎನ್ನಲಾಗಿದೆ. ಆದರೆ ನಾಲ್ಕನೇ ದಿನವೇ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಗ್ರಾಮದ ಹೊರವಲಯದಲ್ಲಿರುವ ಗದ್ದೆಯೊಂದರಲ್ಲಿ ರಮೇಶ್ ರಕ್ತಸಿಕ್ತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ರಮೇಶ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಸ್ಥಳಕ್ಕೆ ಧಾವಿಸಿದ್ದಾರೆ. ಮಗನನ್ನು ಉದ್ದೇಶಪೂರ್ವಕವಾಗಿ ಊರಿಗೆ ಕರೆಸಿಕೊಂಡು ಕೊಲೆ ಮಾಡಲಾಗಿದೆ ಎಂದು ಆರೋಪಿಸಿರುವ ಪೋಷಕರು, ದೇವಮ್ಮ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ದೇವಮ್ಮಳೇ ತಂತ್ರ ರೂಪಿಸಿ ರಮೇಶ್ನನ್ನು ಊರಿಗೆ ಕರೆಸಿಕೊಂಡಿದ್ದು, ಬಳಿಕ ಆಕೆಯ ಕುಟುಂಬಸ್ಥರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬುದು ಮೃತನ ಕುಟುಂಬದ ಆರೋಪವಾಗಿದೆ. ಆದರೆ ಈ ಆರೋಪಗಳು ತನಿಖೆಯಿಂದಲೇ ಸತ್ಯಾಸತ್ಯತೆ ತಿಳಿಯಬೇಕಿದೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರಮೇಶ್ ಸಾವಿನ ಹಿಂದೆ ನಿಜಕ್ಕೂ ಅಕ್ರಮ ಸಂಬಂಧವೇ ಕಾರಣವೇ? ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ರಮೇಶ್ ಕೊನೆಯದಾಗಿ ಯಾರನ್ನು ಭೇಟಿಯಾಗಿದ್ದ, ಆತನಿಗೆ ಯಾರು ಕರೆ ಮಾಡಿದ್ದರು ಹಾಗೂ ಸಾವಿಗೂ ಮುನ್ನ ಏನಾಗಿತ್ತು ಎಂಬ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.






