ರಾಯಚೂರು: ನಗರದ ಮಂತ್ರಾಲಯ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಹೂಳಲಾಗಿದ್ದ ಮೃತದೇಹಗಳನ್ನು ಹೊರತೆಗೆದು ಮಾರಾಟ ಮಾಡುತ್ತಿದ್ದರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಹಳೆಯ ಮತ್ತು ಇತ್ತೀಚೆಗೆ ಹೂಳಲಾದ ಮೃತದೇಹಗಳಿಗೆ ಪ್ರತ್ಯೇಕವಾಗಿ ಹಣ ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಕೆಲವು ಸಂದರ್ಭಗಳಲ್ಲಿ ರಸ್ತೆಗಳ ಮೇಲೆ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದರು ಎನ್ನಲಾಗಿದೆ. ಹಲವು ವರ್ಷಗಳಿಂದ ಮೃತದೇಹಗಳನ್ನು ಪಡೆಯುತ್ತಿದ್ದ ಬಗ್ಗೆ ಖಾಸಗಿ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯೂ ತಪ್ಪೊಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ, ಈ ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ದೃಢಪಡಬೇಕಿದೆ.
ಮೃತದೇಹವಿಲ್ಲದ ಸಮಾಧಿಗಳಿಗೆ ಕುಟುಂಬಸ್ಥರಿಂದ ಪೂಜೆ!
ಆರೋಪಿಗಳು ಮೃತದೇಹಗಳನ್ನು ಹೊರತೆಗೆದ ಬಳಿಕ ಸಮಾಧಿಯ ಗುಂಡಿಗಳನ್ನು ಮತ್ತೆ ಮಣ್ಣಿನಿಂದ ಮುಚ್ಚುತ್ತಿದ್ದರು ಎನ್ನಲಾಗಿದೆ. ಇದರಿಂದ ಸಮಾಧಿಯೊಳಗೆ ಮೃತದೇಹವಿಲ್ಲ ಎಂಬುದು ಕುಟುಂಬಸ್ಥರಿಗೆ ತಿಳಿಯುತ್ತಿರಲಿಲ್ಲ. ಕೆಲವು ಕುಟುಂಬಗಳು ಮೃತದೇಹಗಳೇ ಇಲ್ಲದ ಸಮಾಧಿಗಳ ಮುಂದೆ ಪೂಜೆ ಸಲ್ಲಿಸಿರುವ ಸಾಧ್ಯತೆಯೂ ವ್ಯಕ್ತವಾಗಿದೆ. ಈ ಘಟನೆ ಮೃತರ ಕುಟುಂಬಸ್ಥರ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ ಆತಂಕವನ್ನು ಮೂಡಿಸಿದೆ.
ಮೂವರು ಶಂಕಿತರ ವಶಕ್ಕೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತಾಜಿ ನಗರ ಪೊಲೀಸರು ಸ್ಮಶಾನದ ಸಹಾಯಕ ವೀರೇಶ್, ಖಾಸಗಿ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ರಾಜು ಹಾಗೂ ಅಪ್ಸರ ಎಂಬ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹಗಳನ್ನು ಹೊರತೆಗೆದು ಮಾರಾಟ ಮಾಡಿರುವ ಆರೋಪದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ? ಈ ಕೃತ್ಯ ಎಷ್ಟು ವರ್ಷಗಳಿಂದ ನಡೆಯುತ್ತಿತ್ತು? ಮೃತದೇಹಗಳನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು? ಎಂಬ ಹಲವು ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.
ಗಾಳಿಸುದ್ದಿಯಿಂದ ಆತಂಕಗೊಂಡ ಸ್ಥಳೀಯರು
ಈ ಪ್ರಕರಣದ ಸುದ್ದಿ ಹರಡುತ್ತಿದ್ದಂತೆ ರುದ್ರಭೂಮಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ದೆವ್ವ-ಭೂತಗಳ ಕುರಿತ ಗಾಳಿಸುದ್ದಿಗಳೂ ಹರಡುತ್ತಿದ್ದು, ಸಮೀಪದ ಮನೆಗಳಿಗೆ ಬಾಡಿಗೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಾಡಿಗೆಗೆ ವಾಸವಿರುವ ಕೆಲವರು ಮನೆ ಖಾಲಿ ಮಾಡಿ ಬೇರೆಡೆಗೆ ತೆರಳುತ್ತಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ತನಿಖೆ ಚುರುಕು
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಸ್ಮಶಾನದಲ್ಲಿನ ಮೃತದೇಹಗಳ ಕಳ್ಳತನದ ಕುರಿತು ಸ್ಥಳೀಯರಿಂದ ದೂರುಗಳು ಬಂದಿವೆ. ಈ ಸಂಬಂಧ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ, ರುದ್ರಭೂಮಿಯಲ್ಲಿ ಹೂಳಲಾದ ಮೃತದೇಹಗಳ ಕಳ್ಳತನ ಮತ್ತು ಮಾರಾಟದ ಆರೋಪ ರಾಯಚೂರು ನಗರದಲ್ಲಿ ತೀವ್ರ ಆತಂಕ ಮೂಡಿಸಿದೆ. ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹಾಗೂ ಇದರ ಹಿಂದೆ ಇರುವವರ ವಿವರಗಳು ಪೊಲೀಸ್ ತನಿಖೆಯ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ.
ವರದಿ: ಶಿವು ಪಿ.ಆರ್.
ಹುಬ್ಬಳ್ಳಿ: ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ಮಂಜಾ ದಾರ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಸ್ಕೂಟಿಯಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಮಹಿಳೆಯ…
ಧಾರವಾಡ: ಅರಣ್ಯ ಇಲಾಖೆಯಲ್ಲಿ ಅರಣ್ಯ ಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 38 ವರ್ಷದ ನೌಕರರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…
ಗದಗ: ಜಮೀನಿನಲ್ಲಿ ಕಟಾವು ಮಾಡಿದ ಬಳಿಕ ನೆಲದ ಮೇಲೆ ಬಿದ್ದಿದ್ದ ಮೆಕ್ಕೆಜೋಳದ ಕಾಳುಗಳನ್ನು ಸೇವಿಸಿದ 30 ಕುರಿಗಳು ಸಾವನ್ನಪ್ಪಿರುವ ಘಟನೆ…
ಬೆಳಗಾವಿ: ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ ಅಕ್ಟೋಬರ್ 27ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು…
ಸ್ಟಿಂಗ್ ಆಪರೇಷನ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕೇರಳ ಮೂಲದ ಮಹಿಳೆಯನ್ನು…
ತಿಮ್ಮೇಗೌಡ ನೀಡಿರುವ ದೂರಿನ ಪ್ರಕಾರ, ಅಕ್ಟೋಬರ್ 21ರಂದು ಧನ್ವೀರ್ ಮೈಸೂರಿಗೆ ತೆರಳಿದ್ದ ಸಂದರ್ಭದಲ್ಲಿ ವಿಜಯಲಕ್ಷ್ಮೀ ದರ್ಶನ್ ಮತ್ತು ನಾಗರಾಜ್ ಅವರ…