ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಜೂನ್ 3, 2026ರ ಬುಧವಾರ ಮಧ್ಯಾಹ್ನದ ಬಳಿಕ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿಗಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ.

ನೂತನ ಮುಖ್ಯಮಂತ್ರಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಜೂನ್ 3ರಂದು ಸಂಜೆ 4.05 ಗಂಟೆಗೆ ಬೆಂಗಳೂರಿನ ಕರ್ನಾಟಕ ಲೋಕಭವನದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದೆ. ಪರಿಣಾಮವಾಗಿ ಲೋಕಭವನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಜನಸಂದಣಿ ಮತ್ತು ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಭದ್ರತೆ, ಸುರಕ್ಷತೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವಿಶೇಷವಾಗಿ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿಗಳ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮಧ್ಯಾಹ್ನದ ನಂತರ ರಜೆ ನೀಡಲಾಗಿದೆ.

ರಾಜ್ಯಪಾಲರ ಆದೇಶದ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಕಾರ್ಯಕಾರಿ) ವತಿಯಿಂದ ಈ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆರ್. ಯದು ಕುಮಾರ್ ಅವರು ಸಿಆಸುಇ 68 ಹೆಚ್‌ಇಟಿ 2026 ಸಂಖ್ಯೆಯ ಆದೇಶಕ್ಕೆ ಸಹಿ ಹಾಕಿದ್ದಾರೆ.

ಪ್ರಮಾಣ ವಚನ ಸಮಾರಂಭದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮತ್ತು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Related News

error: Content is protected !!