ಬೆಳಗಾವಿಯಲ್ಲಿ ಮಾಜಿ ಸೈನಿಕನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದ್ದು, ಮೃತನ ಪತ್ನಿಯ ಪ್ರಿಯಕರನೊಬ್ಬ ಬಿಡುಗಡೆ ಮಾಡಿದ ಸೆಲ್ಫಿ ವಿಡಿಯೋ ಇದೀಗ ಪ್ರಕರಣದ ರಹಸ್ಯಗಳನ್ನು ಬಹಿರಂಗಪಡಿಸಿದೆ.
ಮೃತ ಮಾಜಿ ಸೈನಿಕ ಸಂದೀಪ್ ಅವರ ಪತ್ನಿ ಸುಮಾ ಹಾಗೂ ಆಕೆಯ ಪ್ರಿಯಕರ ಪುಂಡಲೀಕ ಗೋಡಗೇರಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ವಿಡಿಯೋದಲ್ಲಿ ಮಾತನಾಡಿರುವ ಪುಂಡಲೀಕ, ತಾನು ಎಗ್ ರೈಸ್ ಅಂಗಡಿ ನಡೆಸುತ್ತಿದ್ದ ವೇಳೆ ಸಂದೀಪ್ ಹಾಗೂ ಸುಮಾ ಪರಿಚಯವಾಗಿದ್ದರು ಎಂದು ಹೇಳಿದ್ದಾನೆ.
ಸುಮಾ ಮನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮದ್ಯ ಸಂಗ್ರಹಿಸಿಟ್ಟುಕೊಂಡಿದ್ದು, ಅದರಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಿ ಸಂದೀಪ್ಗೆ ನೀಡುತ್ತಿದ್ದಳು ಎಂದು ಪುಂಡಲೀಕ ಆರೋಪಿಸಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ “ಗಂಡ ಸಾಯಲಿ” ಎಂದು ಸುಮಾ ಹೇಳುತ್ತಿದ್ದಳು ಎಂದು ಆತ ವಿಡಿಯೋದಲ್ಲಿ ತಿಳಿಸಿದ್ದಾನೆ.
ಒಮ್ಮೆ ಅಪಘಾತದಲ್ಲಿ ಗಾಯಗೊಂಡು ಸಂದೀಪ್ ಆಸ್ಪತ್ರೆಗೆ ದಾಖಲಾಗಿದ್ದಾಗ, ಸುಮಾ ತನ್ನಿಂದ ಹುಳುನಾಶಕ ಔಷಧಿ ತರಿಸಿಕೊಂಡಿದ್ದಳು. ತಾನು ಔಷಧಿ ತಂದುಕೊಟ್ಟ ಮರುದಿನವೇ ಸಂದೀಪ್ ಮೃತಪಟ್ಟಿದ್ದಾನೆ. ಬಳಿಕ ಔಷಧಿ ಸೇರಿದಂತೆ ಇತರೆ ವಸ್ತುಗಳನ್ನು ಎಲ್ಲಿಯಾದರೂ ಬಿಸಾಡುವಂತೆ ಸುಮಾ ಸೂಚಿಸಿದ್ದಳು ಎಂದು ಪುಂಡಲೀಕ ಹೇಳಿದ್ದಾನೆ.
ಇದರ ಜೊತೆಗೆ, ಗಂಡನ ಹೆಸರಿನಲ್ಲಿ ಸುಮಾರು 2 ಕೋಟಿ ರೂಪಾಯಿ ವಿಮೆ ಮಾಡಿಸಿರುವುದಾಗಿ ಹಾಗೂ ಗಂಡ ಮೃತಪಟ್ಟರೆ ವಿಮೆ ಹಣ ಸಿಗುತ್ತದೆ ಎಂದು ಸುಮಾ ಹೇಳಿದ್ದಳು ಎಂದು ಆತ ಆರೋಪಿಸಿದ್ದಾನೆ. ಬಳಿಕ ಇಬ್ಬರ ಮಕ್ಕಳನ್ನು ಕರೆದುಕೊಂಡು ಊರು ಬಿಟ್ಟು ಬೇರೆಡೆ ಜೀವನ ಆರಂಭಿಸುವ ಯೋಜನೆಯನ್ನೂ ಆಕೆ ಪ್ರಸ್ತಾಪಿಸಿದ್ದಳು ಎಂದು ಪುಂಡಲೀಕ ತಿಳಿಸಿದ್ದಾನೆ.
“ನಾನು ಸುಳ್ಳು ಹೇಳುತ್ತಿದ್ದರೆ ಜೈಲಿಗೆ ಹೋಗಲು ಸಿದ್ಧನಿದ್ದೇನೆ. ಸಂದೀಪ್ ಅವರ ಮೃತದೇಹದ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು. ಸತ್ಯ ಹೊರಬರಬೇಕು ಮತ್ತು ವಿಮೆ ಹಣ ಸುಮಾಗೆ ಸಿಗಬಾರದು” ಎಂದು ಆತ ವಿಡಿಯೋದಲ್ಲಿ ಒತ್ತಾಯಿಸಿದ್ದಾನೆ.
ಇದೇ ವೇಳೆ ಹಣಕಾಸಿನ ವಿಚಾರದಲ್ಲಿ ಸುಮಾ ಮತ್ತು ಪುಂಡಲೀಕ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ. ಹಣದ ವಿಷಯವಾಗಿ ಹಲವು ಬಾರಿ ಇಬ್ಬರ ನಡುವೆ ಗಲಾಟೆಗಳು ನಡೆದಿದ್ದು, ಈ ವೇಳೆ ಪುಂಡಲೀಕ ತನ್ನ ಸ್ನೇಹಿತರ ಬಳಿ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ. ಸ್ನೇಹಿತರು ಪೊಲೀಸರ ಮುಂದೆ ಸತ್ಯ ಹೇಳುವಂತೆ ಸಲಹೆ ನೀಡಿದ ಬಳಿಕ ಆತ ಪೊಲೀಸರನ್ನು ಸಂಪರ್ಕಿಸಿ ಎಲ್ಲಾ ಮಾಹಿತಿಯನ್ನು ನೀಡಿದ್ದಾನೆ.
ಪುಂಡಲೀಕ ನೀಡಿದ ಮಾಹಿತಿಯ ಆಧಾರದಲ್ಲಿ ಯಮಕನಮರಡಿ ಪೊಲೀಸರು ತನಿಖೆ ಮುಂದುವರಿಸಿದ್ದು, ವಿಚಾರಣೆ ವೇಳೆ ಸುಮಾ ತನ್ನ ಪತಿ ಸಂದೀಪ್ ಹತ್ಯೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಪ್ರಿಯಕರ ಪುಂಡಲೀಕನ ಸಹಾಯದಿಂದಲೇ ಹತ್ಯೆ ನಡೆಸಿರುವುದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಸ್ತುತ ಆರೋಪಿಗಳಾದ ಸುಮಾ ಹಾಗೂ ಪುಂಡಲೀಕ ಪೊಲೀಸ್ ವಶದಲ್ಲಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
