Categories: Latest

ಗೌರಿಬಿದನೂರಿನಲ್ಲಿ ಚಲಿಸುತ್ತಿದ್ದ ಸರ್ಕಾರಿ ಬಸ್‌ಗೆ ಬೆಂಕಿ: ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಗೌರಿಬಿದನೂರು: ಚಲಿಸುತ್ತಿದ್ದ ಸರ್ಕಾರಿ ಬಸ್‌ನ ಎಂಜಿನ್‌ ಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಇಡೀ ಬಸ್ ಸುಟ್ಟುಹೋದ ಘಟನೆ ಗೌರಿಬಿದನೂರು ತಾಲ್ಲೂಕಿನ ಎಂ.ಗೊಲ್ಲಹಳ್ಳಿ ಗ್ರಾಮದ ಸಮೀಪ ಶನಿವಾರ ಮಧ್ಯಾಹ್ನ ನಡೆದಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಸುಮಾರು 30ರಿಂದ 40 ಮಂದಿ ಪ್ರಯಾಣಿಕರು ಸಮಯಪ್ರಜ್ಞೆ ಮೆರೆದು ತಕ್ಷಣವೇ ಬಸ್‌ನಿಂದ ಕೆಳಗಿಳಿದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಗೌರಿಬಿದನೂರಿನಿಂದ ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಸರ್ಕಾರಿ ಬಸ್ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಎಂ.ಗೊಲ್ಲಹಳ್ಳಿ ಸಮೀಪ ಸಂಚರಿಸುತ್ತಿದ್ದಾಗ ಎಂಜಿನ್‌ ಭಾಗದಿಂದ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪ್ರಯಾಣಿಕರು ಆತಂಕಗೊಂಡು ತಕ್ಷಣ ಚಾಲಕ ಹಾಗೂ ನಿರ್ವಾಹಕರಿಗೆ ಮಾಹಿತಿ ನೀಡಿದ್ದಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ಕೂಡಲೇ ಬಸ್‌ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ನಿರ್ವಾಹಕರ ಸಹಾಯದಿಂದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಪ್ರಯಾಣಿಕರು ಬಸ್‌ನಿಂದ ಇಳಿದ ಕೆಲವೇ ಕ್ಷಣಗಳಲ್ಲಿ ಎಂಜಿನ್‌ ಭಾಗದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ತೀವ್ರಗೊಂಡು ಬಸ್‌ನ ಇತರ ಭಾಗಗಳಿಗೂ ವೇಗವಾಗಿ ವ್ಯಾಪಿಸಿದೆ.

ಬಸ್‌ನ ಸೀಟುಗಳಲ್ಲಿ ಅಳವಡಿಸಲಾಗಿದ್ದ ಸ್ಪಂಜ್ ಸೇರಿದಂತೆ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಿಂದಾಗಿ ಬೆಂಕಿ ಕ್ಷಣಾರ್ಧದಲ್ಲೇ ಇಡೀ ಬಸ್‌ಗೆ ಆವರಿಸಿದೆ. ಪರಿಣಾಮ ಸರ್ಕಾರಿ ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಿದ್ದ ಸುಮಾರು 30 ವಿದ್ಯಾರ್ಥಿಗಳು ಸೇರಿದಂತೆ ಎಂ.ಗೊಲ್ಲಹಳ್ಳಿ, ಜಗರೆಡ್ಡಿಹಳ್ಳಿ, ಮರಿಪಡುಗು ಹಾಗೂ ಜಿಲಾಗುಂಟೆ ಗ್ರಾಮಗಳ ಹಲವು ಸಾರ್ವಜನಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಎಲ್ಲರೂ ಬಸ್‌ನಿಂದ ಹೊರಬಂದಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಸ್ಥಳೀಯರ ಪ್ರಕಾರ, ಮಾಹಿತಿ ನೀಡಿದ ಸುಮಾರು ಒಂದೂವರೆ ಗಂಟೆಯ ಬಳಿಕ ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿದ್ದು, ಅಷ್ಟರಲ್ಲಾಗಲೇ ಬಸ್ ಬಹುತೇಕ ಸಂಪೂರ್ಣವಾಗಿ ಸುಟ್ಟುಹೋಗಿತ್ತು.

ಈ ಕುರಿತು ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ರವಿಶಂಕರ್ ಅವರು ‘ಭ್ರಷ್ಟರ ಬೇಟೆ’ ಪ್ರತಿನಿಧಿ ಅವಿನಾಶ್ ಅವರೊಂದಿಗೆ ಮಾತನಾಡಿ, ಬಸ್ ಡಿಪೋದಿಂದ ಹೊರಡುವ ಮುನ್ನ ಸಿಬ್ಬಂದಿ ಎಂದಿನಂತೆ ಪರಿಶೀಲನೆ ನಡೆಸಿದ್ದರು. ಆ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿರಲಿಲ್ಲ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಪ್ರಾಣಾಪಾಯವಾಗಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

ಸರ್ಕಾರಿ ಬಸ್ ಚಲಿಸುತ್ತಿರುವಾಗಲೇ ಬೆಂಕಿ ಕಾಣಿಸಿಕೊಂಡಿರುವುದು ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಮೂಡಿಸಿತು. ಆದರೆ ಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ತಕ್ಷಣ ಕ್ರಮ ಕೈಗೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

ಬಸ್‌ಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಾಂತ್ರಿಕ ಪರಿಶೀಲನೆ ನಡೆಸಿ ಕಾರಣವನ್ನು ಪತ್ತೆಹಚ್ಚಬೇಕಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರಿ ಸಾರಿಗೆ ಬಸ್‌ಗಳ ತಾಂತ್ರಿಕ ತಪಾಸಣೆಯನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸುವ ಅಗತ್ಯವಿದೆ.

ವರದಿ: ಅವಿನಾಶ್

ಭ್ರಷ್ಟರ ಬೇಟೆ

Recent Posts

ಯುವತಿ ಅತ್ಯಾಚಾರ, ಕೊಲೆ ಪ್ರಕರಣ: ಕರ್ತವ್ಯಲೋಪ ಆರೋಪದಲ್ಲಿ 4 ಪೊಲೀಸ್ ಪೇದೆಗಳು ಅಮಾನತು

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ 21 ವರ್ಷದ ಯುವತಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ…

20 hours ago

KSRTC ಬಸ್‌ನಲ್ಲಿ ಯುವತಿಗೆ ಕಿರುಕುಳ ಆರೋಪ: ಚಪ್ಪಲಿಯಿಂದ ಯುವಕನಿಗೆ ಧರ್ಮದೇಟು, ಕ್ಷಮೆಯಾಚನೆ

ಹಾಸನ: ಹಾಸನದಿಂದ ಬೆಂಗಳೂರಿನತ್ತ ತೆರಳುತ್ತಿದ್ದ KSRTC ಬಸ್‌ನಲ್ಲಿ ಯುವತಿಯೊಬ್ಬರಿಗೆ ಸಹ ಪ್ರಯಾಣಿಕನೊಬ್ಬ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಇದರಿಂದ ಬಸ್‌ನಲ್ಲಿ…

20 hours ago

MBBS ಓದಲು ರಷ್ಯಾಗೆ ಹೋದ ಯುವಕನಿಗೆ ಪ್ರೊಫೆಸರ್ ಜೊತೆ ಪ್ರೀತಿ; ಮದುವೆ ಬಳಿಕ ಕ್ಲಿನಿಕ್ ಆರಂಭಿಸಿ ಲಕ್ಷಾಂತರ ಸಂಪಾದನೆ!

ಉನ್ನತ ವ್ಯಾಸಂಗದ ಕನಸು ಹೊತ್ತು ವಿದೇಶಕ್ಕೆ ತೆರಳಿದ್ದ ಉತ್ತರ ಪ್ರದೇಶದ ಯುವಕನ ಜೀವನ ಇದೀಗ ಸಂಪೂರ್ಣ ಬದಲಾಗಿದೆ. ಎಂಬಿಬಿಎಸ್ ಓದಲು…

20 hours ago

ಶಾಲಾ ಬಾಲಕಿಯರನ್ನು ಪ್ರೇಮದ ಬಲೆಗೆ ಬೀಳಿಸಿ ಹಣ ಸಂಪಾದನೆ ಆರೋಪ: ದೆಹಲಿಯಲ್ಲಿ 24 ವರ್ಷದ ಯುವಕ ಬಂಧನ

ದೆಹಲಿಯ ಉತ್ತಮ್ ನಗರದಲ್ಲಿ 24 ವರ್ಷದ ಯುವಕನೊಬ್ಬನನ್ನು ಸ್ಥಳೀಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬಳಿಕ, ಆತನ ಮೊಬೈಲ್‌ನಲ್ಲಿ ಪತ್ತೆಯಾದ…

20 hours ago

ಕಿತ್ತೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಆಭರಣ ಕಳ್ಳತನ ಪ್ರಕರಣ ಭೇದಿಸಿ 5 ಅಂತರರಾಜ್ಯ ಕಳ್ಳರ ಬಂಧನ

ಕಿತ್ತೂರು: ಚನ್ನಮ್ಮನ ಕಿತ್ತೂರಿನಲ್ಲಿ ನಡೆದ ಆಭರಣ ಅಂಗಡಿ ಕಳ್ಳತನ ಪ್ರಕರಣವನ್ನು ಕಿತ್ತೂರು ಪೊಲೀಸರು ಭೇದಿಸಿದ್ದು, ರಾಜಸ್ಥಾನ ಮೂಲದ ನಾಲ್ವರು ಹಾಗೂ…

20 hours ago

ಬೆಳಗಾವಿಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಅನುಷ್ಠಾನದ ಮೌಲ್ಯಮಾಪನ: ಸಂತ್ರಸ್ತರೊಂದಿಗೆ ಗುಂಪು ಚರ್ಚೆ

ಬೆಳಗಾವಿ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅನುಷ್ಠಾನದ ಕುರಿತು ನೈರುತ್ಯ ಆರ್ಟ ಮೀಡಿಯಾ ಸಂಸ್ಥೆ (ಬೆಂಗಳೂರು)…

20 hours ago