ಅಥಣಿ: ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಹಿಳೆಯೊಬ್ಬಳು ತನ್ನ ಶಾಲಾ ದಿನಗಳ ಸ್ನೇಹಿತನ ನೆರವಿನಿಂದ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ನಡೆದಿದೆ. ಸೆಪ್ಟೆಂಬರ್ 21ರಂದು ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಅಥಣಿ ಠಾಣೆ ಪೊಲೀಸರು, ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹತ್ಯೆಯಾದ ವ್ಯಕ್ತಿಯನ್ನು ರಣವೀರ ರಜಪೂತ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀದೇವಿ ರಜಪೂತ ಹಾಗೂ ಆಕೆಯ ಶಾಲಾ ಸ್ನೇಹಿತ ಬೈರು ಪವಾರ್ ಬಂಧಿತರಾಗಿದ್ದು, ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕಿರುಕುಳದ ಆರೋಪ, ಕೊಲೆಗೆ ಸಂಚು

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ರಣವೀರ ರಜಪೂತ ಶ್ರೀದೇವಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಶ್ರೀದೇವಿ ಈ ವಿಚಾರವನ್ನು ತನ್ನ ಶಾಲಾ ಸ್ನೇಹಿತ ಬೈರು ಪವಾರ್ ಬಳಿ ಹೇಳಿಕೊಂಡಿದ್ದಳು. ಬಳಿಕ ಇಬ್ಬರೂ ಸೇರಿ ರಣವೀರನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಸೆಪ್ಟೆಂಬರ್ 21ರ ರಾತ್ರಿ ಯೋಜನೆಯಂತೆ ಬೈರು ಪವಾರ್, ತನ್ನ ದ್ವಿಚಕ್ರ ವಾಹನ ಕೆಟ್ಟುಹೋಗಿದೆ ಎಂದು ರಣವೀರನಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದ್ದಾನೆ. ಸಹಾಯ ಮಾಡಲು ಬಂದ ರಣವೀರನ ಮೇಲೆ ಏಕಾಏಕಿ ದಾಳಿ ನಡೆಸಿದ ಬೈರು, ಆತನ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ಮಾಡಿದ ಬಳಿಕ ಬೈರು, ಶ್ರೀದೇವಿಗೆ ಮೊಬೈಲ್ ಮೂಲಕ ಕರೆ ಮಾಡಿ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ತಾಂತ್ರಿಕ ಸಾಕ್ಷ್ಯದಿಂದ ಬಯಲಾದ ರಹಸ್ಯ

ಘಟನೆಗೆ ಸಂಬಂಧಿಸಿದಂತೆ ಅಥಣಿ ಠಾಣೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆಯ ವೇಳೆ ತಾಂತ್ರಿಕ ಸಾಕ್ಷ್ಯಗಳು ಹಾಗೂ ಕರೆಗಳ ವಿವರಗಳನ್ನು ಪರಿಶೀಲಿಸಿದಾಗ ಪ್ರಕರಣದ ಹಲವು ಸಂಗತಿಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯ ಆಧಾರದ ಮೇಲೆ ಶ್ರೀದೇವಿ ರಜಪೂತ ಹಾಗೂ ಬೈರು ಪವಾರ್ ಅವರನ್ನು ಬಂಧಿಸಲಾಗಿದ್ದು, ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಕೊಲೆಗೆ ಸಂಬಂಧಿಸಿದಂತೆ ಇನ್ನೂ ಯಾವುದಾದರೂ ಕಾರಣಗಳು ಅಥವಾ ಇತರರ ಪಾತ್ರವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!