ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ವೆಂಕಟೇಶ್ವರ ನಗರದಲ್ಲಿ ಪ್ರೇಮ ನಿರಾಕರಣೆ ಕೋಪಕ್ಕೆ ಕಾರಣವಾಗಿದೆ. ಪ್ರೀತಿಸುವಂತೆ ಒತ್ತಾಯಿಸಿ ಯುವತಿ ಮನೆ ಮುಂದೆ ಹಾವಳಿ ನಡೆಸಿದ ಯುವಕ, ಆಕೆಯ ಪೋಷಕರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

ನಿರಾಕರಿಸಿದ ಪ್ರೇಮ, ನಿತ್ಯ ಕಿರುಕುಳ

ವೆಂಕಟೇಶ್ವರ ನಗರ ನಿವಾಸಿ ಸತೀಶ್ ಅವರ ಮಗಳು ಕಾಲೇಜು ವಿದ್ಯಾರ್ಥಿನಿ. ಆಕೆಗೆ ವಸಂತ್ ಎಂಬ ಯುವಕ ಪ್ರೀತಿಯ ಒತ್ತಾಯ ಮಾಡುತ್ತಿದ್ದನು. ಆದರೆ ಯುವತಿಯ ನಿರಾಕರಣೆಗೆ ತಾಳಲಾರದೆ, ಪ್ರತಿದಿನವೂ ಆಕೆಯ ಹಿಂದೆ ಬಿದ್ದು ಕಿರುಕುಳ ನೀಡುತ್ತಿದ್ದನು. ನಿರಂತರ ಕಿರಿಕಿರಿ ತಾಳಲಾಗದ ಯುವತಿ ಕೆಲ ದಿನಗಳ ಕಾಲ ಸಿಂಧನೂರಿನಿಂದ ಹೊರಟು ಹೋಗಿದ್ದಳು.

ಕುಡಿದು ಮನೆ ಮುಂದೆ ಹಂಗಾಮಾ

ಆಕೆ ಮರಳಿ ಪಟ್ಟಣಕ್ಕೆ ಬಂದ ಸುದ್ದಿ ತಿಳಿದ ವಸಂತ್, ಕೋಪದಿಂದ ಕುಡಿದು, ಯುವತಿ ಮನೆಯ ಮುಂದೆ ಗಲಾಟೆ ಆರಂಭಿಸಿದ್ದಾನೆ. ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿ, ಅಸಭ್ಯ ವರ್ತನೆ ಮೆರೆದಿದ್ದಾನೆ. ಈ ಅವ್ಯವಹಾರಕ್ಕೆ ವಿರೋಧ ವ್ಯಕ್ತಪಡಿಸಿದ ಯುವತಿಯ ತಂದೆ ಸತೀಶ್ ಅವರೊಂದಿಗೆ ವಸಂತ್ ಹೊಡೆದಾಟ ನಡೆಸಿದ್ದಾನೆ.

ಗಲಾಟೆಯಲ್ಲಿ ಇಬ್ಬರಿಗೆ ಗಾಯ

ಕಿತ್ತಾಟದ ವೇಳೆ ಇಬ್ಬರೂ ಗಾಯಗೊಂಡಿದ್ದು, ಅವರನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತಂತೆ ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪುಂಡತನದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related News

error: Content is protected !!