ಹರ್ದೋಯಿ/ಲೂಧಿಯಾನ: ಗರ್ಭಿಣಿ ಪತ್ನಿಯನ್ನು ಬಿಟ್ಟು ಪ್ರೇಯಸಿ ಜೊತೆ ಓಡಿಹೋಗಿ, ಮತ್ತೊಂದು ಮದುವೆಯಾಗಿ ಹೊಸ ಸಂಸಾರ ಹೂಡಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ ಏಳು ವರ್ಷಗಳ ಬಳಿಕ ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಪತ್ತೆಯಾಗಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಪತಿ ನಾಪತ್ತೆಯಾದ ಬಳಿಕ ಆತನನ್ನೇ ಕೊಂದ ಆರೋಪ ಎದುರಿಸಿ ವರ್ಷಗಳ ಕಾಲ ಕಿರುಕುಳ ಅನುಭವಿಸಿದ್ದ ಪತ್ನಿ, ಕೊನೆಗೂ ಖುದ್ದಾಗಿ ಪಂಜಾಬ್‌ನ ಲೂಧಿಯಾನಕ್ಕೆ ತೆರಳಿ ಪೊಲೀಸರ ನೆರವಿನಿಂದ ಪತಿಯನ್ನು ಪತ್ತೆಹಚ್ಚಿದ್ದಾಳೆ.
ಗರ್ಭಿಣಿಯಾಗಿದ್ದಾಗಲೇ ನಾಪತ್ತೆಯಾದ ಪತಿ!
ಉತ್ತರ ಪ್ರದೇಶದ ಹರ್ದೋಯಿ ಮೂಲದ ಶೀಲು ಎಂಬ ಯುವತಿಗೆ 2017ರಲ್ಲಿ ಜಿತೇಂದ್ರ ಕುಮಾರ್ ಎಂಬಾತನೊಂದಿಗೆ ವಿವಾಹವಾಗಿತ್ತು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಶೀಲು ಗರ್ಭಿಣಿಯಾಗಿದ್ದಳು. ಆದರೆ 2018ರಲ್ಲಿ ಹೆರಿಗೆಗೂ ಮುನ್ನವೇ ಜಿತೇಂದ್ರ ಏಕಾಏಕಿ ನಾಪತ್ತೆಯಾಗಿದ್ದ. ಕುಟುಂಬಸ್ಥರು ಹಲವು ಕಡೆ ಹುಡುಕಾಟ ನಡೆಸಿದರೂ ಆತನ ಸುಳಿವು ಸಿಕ್ಕಿರಲಿಲ್ಲ.
ಪತಿ ನಾಪತ್ತೆ, ಪತ್ನಿಯ ಮೇಲೆ ಕೊಲೆ ಆರೋಪ!
ಜಿತೇಂದ್ರ ಕಾಣೆಯಾಗುತ್ತಿದ್ದಂತೆ ಆತನ ಕಡೆಯ ಸಂಬಂಧಿಕರು ಶೀಲು ವಿರುದ್ಧವೇ ಅನುಮಾನ ವ್ಯಕ್ತಪಡಿಸಿದ್ದರು. ಜಿತೇಂದ್ರನನ್ನು ಕೊಲೆ ಮಾಡಲಾಗಿದೆ, ಇದರಲ್ಲಿ ಶೀಲು ಮನೆಯವರ ಕೈವಾಡವಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು ಎನ್ನಲಾಗಿದೆ. ಇದರಿಂದ ಶೀಲು ತೀವ್ರ ಮಾನಸಿಕ ಸಂಕಷ್ಟ ಎದುರಿಸುವಂತಾಗಿತ್ತು.
ಒಂದು ಕಡೆ ಮಗುವಿನ ಜವಾಬ್ದಾರಿ, ಮತ್ತೊಂದೆಡೆ ಪತಿಯ ನಾಪತ್ತೆಯ ಹಿನ್ನೆಲೆಯಲ್ಲಿ ಎದುರಾದ ಆರೋಪಗಳು. ಹೀಗೆ ಸುಮಾರು ಏಳು ವರ್ಷಗಳ ಕಾಲ ಶೀಲು ಒಂಟಿಯಾಗಿ ಜೀವನ ಸಾಗಿಸಿದ್ದಳು. ಪತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ, ಆತನನ್ನು ಕೊಂದ ಆರೋಪದ ಕಳಂಕವನ್ನು ಹೊತ್ತು ಬದುಕಬೇಕಾದ ಪರಿಸ್ಥಿತಿ ಎದುರಾಗಿತ್ತು.
ಅಸಲಿ ಸತ್ಯ ಬಯಲು ಮಾಡಿದ ಇನ್‌ಸ್ಟಾಗ್ರಾಮ್ ರೀಲ್ಸ್!
ಆದರೆ, ಜಿತೇಂದ್ರ ಬದುಕಿನ ಅಸಲಿ ಕಥೆಯೇ ಬೇರೆಯಾಗಿತ್ತು. ಆತ ತನ್ನ ಪ್ರೇಯಸಿಯೊಂದಿಗೆ ಪಂಜಾಬ್‌ನ ಲೂಧಿಯಾನಕ್ಕೆ ತೆರಳಿ, ಅಲ್ಲಿ ಮತ್ತೊಂದು ಮದುವೆಯಾಗಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಲೂಧಿಯಾನದ ಗಣೇಶ ಮಂಟಪವೊಂದರಲ್ಲಿ ಮಹಿಳೆಯೊಬ್ಬಳೊಂದಿಗೆ ಜಿತೇಂದ್ರ ನೃತ್ಯ ಮಾಡಿದ್ದಾನೆ. ಈ ದೃಶ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ರೂಪದಲ್ಲಿ ಹಂಚಿಕೊಳ್ಳಲಾಗಿತ್ತು. ಕಾಕತಾಳೀಯವಾಗಿ ಈ ವಿಡಿಯೋ ಶೀಲು ಕಣ್ಣಿಗೆ ಬಿದ್ದಿದೆ.
ವಿಡಿಯೋದಲ್ಲಿದ್ದ ವ್ಯಕ್ತಿ ತನ್ನ ಪತಿಯೇ ಇರಬಹುದು ಎಂದು ಅನುಮಾನಗೊಂಡ ಶೀಲು, ಆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿದ್ದ ಇತರ ವಿಡಿಯೋಗಳನ್ನೂ ಪರಿಶೀಲಿಸಿದ್ದಾಳೆ. ಈ ವೇಳೆ ಜಿತೇಂದ್ರ ತನ್ನ ಪ್ರೇಯಸಿಯೊಂದಿಗೆ ಮತ್ತೊಂದು ಮದುವೆಯಾಗಿ ಲೂಧಿಯಾನದಲ್ಲಿ ವಾಸಿಸುತ್ತಿರುವ ಸುಳಿವು ಸಿಕ್ಕಿದೆ ಎನ್ನಲಾಗಿದೆ.
ಏಳು ವರ್ಷಗಳ ಬಳಿಕ ಪತಿಯನ್ನು ಪತ್ತೆಹಚ್ಚಿದ ಪತ್ನಿ!
ವಿಡಿಯೋಗಳಿಂದ ಸುಳಿವು ಪಡೆದ ಶೀಲು, ತಡಮಾಡದೆ ಲೂಧಿಯಾನಕ್ಕೆ ತೆರಳಿದ್ದಾಳೆ. ಸ್ಥಳೀಯ ಪೊಲೀಸರ ಸಹಾಯದಿಂದ ಜಿತೇಂದ್ರನನ್ನು ಪತ್ತೆಹಚ್ಚಿ ಠಾಣೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾಳೆ.
ಏಳು ವರ್ಷಗಳ ಕಾಲ ಪತಿ ನಾಪತ್ತೆಯಾದ ನೋವಿನ ಜೊತೆಗೆ ಕೊಲೆ ಆರೋಪದ ಕಳಂಕವನ್ನೂ ಎದುರಿಸಿದ್ದ ಶೀಲುಗೆ, ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಪತಿಯ ಸುಳಿವು ಸಿಕ್ಕಿರುವುದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ. ಸದ್ಯ ಜಿತೇಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಮುಂಬೈ: ಚಿತ್ರರಂಗದ ಗ್ಲಾಮರ್ ಜಗತ್ತಿನ ಹಿಂದೆ ಅಡಗಿರುವ ಕಹಿ ಸತ್ಯಗಳನ್ನು ಹಲವು ನಟಿಯರು ಬಹಿರಂಗಪಡಿಸುತ್ತಲೇ ಬಂದಿದ್ದಾರೆ. ಇದೀಗ ಕಿರುತೆರೆ ಹಾಗೂ…
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸೆಕ್ಸ್ ಟಿಪ್ಸ್ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು, ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ…
ಮುಂಬೈ: ನಂಬಿಕೆಯಿಂದ ಕೋಣೆಗೆ ಬಣ್ಣ ಬಳಿಯಲು ಕರೆಸಿಕೊಂಡ ಪೇಂಟರ್‌ನ ಕಳಪೆ ಕೆಲಸ ಕಂಡು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿಯೊಬ್ಬಳು…
ಭಟ್ಕಳ: ಸಾಲ ಪಡೆದ ಹಣವನ್ನು ಮರುಪಾವತಿಸದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶಿರಸಿ ಮೂಲದ ರವೀಶ ವೆಂಕಟ್ರಮಣ ಹೆಗಡೆ ಅವರನ್ನು ಭಟ್ಕಳ…
ಮುಂಬೈ: ಬಾಲಿವುಡ್‌ನ ಫಿಟ್ನೆಸ್ ಹಾಗೂ ಫ್ಯಾಷನ್ ಐಕಾನ್ ಮಲೈಕಾ ಅರೋರಾ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಆಗಾಗ್ಗೆ ಸುದ್ದಿಯಾಗುತ್ತಾರೆ. ಇದೀಗ…
ಚಂದ್ರಗಿರಿ (ತಿರುಪತಿ): ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ಭಾವಿಸಲಾಗಿದ್ದ ಪ್ರಕರಣವೊಂದು ತನಿಖೆಯ ಬಳಿಕ ಬೇರೆಯದೇ ತಿರುವು…