
ಕುಷ್ಟಗಿ: ಸರ್ಕಾರಿ ಕಚೇರಿಗೆ ಆಗಮಿಸಿದ ಕೆಲ ವ್ಯಕ್ತಿಗಳು ಮಹಿಳಾ ಅಧಿಕಾರಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಏರುಧ್ವನಿಯಲ್ಲಿ ವಾಗ್ವಾದ ನಡೆಸಿದ ಪರಿಣಾಮ ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಉಮಾದೇವಿ ಬಸಾಪುರ ಅವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ಬಿಇಒ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ವಾಗ್ವಾದದಿಂದ ಉಂಟಾದ ಮಾನಸಿಕ ಒತ್ತಡದ ಪರಿಣಾಮ ಉಮಾದೇವಿ ಅವರ ರಕ್ತದೊತ್ತಡ ಹೆಚ್ಚಾಗಿ, ಉಸಿರಾಟದಲ್ಲಿ ಏರುಪೇರಾಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು, ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.
ಹಣ ದುರ್ಬಳಕೆ ಪ್ರಕರಣವೇ ವಾಗ್ವಾದಕ್ಕೆ ಕಾರಣ?
ಬಿಇಒ ಕಚೇರಿಯ ಸಿಬ್ಬಂದಿಯಿಂದ ಸುಮಾರು 70 ಲಕ್ಷ ರೂಪಾಯಿ ದುರ್ಬಳಕೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬುಧವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇದೇ ವಿಚಾರವಾಗಿ ಆಕ್ರೋಶಗೊಂಡ ಕೆಲವರು ಗುರುವಾರ ಬಿಇಒ ಕಚೇರಿಗೆ ಆಗಮಿಸಿ, ಇತರರ ಖಾತೆಗಳಿಗೂ ಲಕ್ಷಾಂತರ ರೂಪಾಯಿ ಹಣ ಜಮೆಯಾಗಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಬಿಇಒ ಅವರು ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದಂತೆ ಸೂಚನೆ ನೀಡಿದಾಗ, ಆತ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ನಂತರ ಆ ಸಿಬ್ಬಂದಿಯ ಪರವಾಗಿ ಪಟ್ಟಣದ ನಾಲ್ಕೈದು ವ್ಯಕ್ತಿಗಳು ಕಚೇರಿಗೆ ಆಗಮಿಸಿ ಉಮಾದೇವಿ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಏರುಧ್ವನಿಯಲ್ಲಿ ಏಕವಚನ ಬಳಸಿ ಮಾತನಾಡಿದ್ದರಿಂದ ಬಿಇಒ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ಕಚೇರಿಯ ಆಡಳಿತಾತ್ಮಕ ವಿಚಾರಗಳ ಬಗ್ಗೆ ಆಕ್ಷೇಪಗಳಿದ್ದರೆ ಲಿಖಿತ ರೂಪದಲ್ಲಿ ದೂರು ಸಲ್ಲಿಸುವಂತೆ ತಿಳಿಸಿದರೂ, ಬಂದವರು ವಾಗ್ವಾದ ಮುಂದುವರಿಸಿದ್ದಾರೆ ಎಂದು ಮೂಲಗಳು ಆರೋಪಿಸಿವೆ. ಸರ್ಕಾರಿ ಅಧಿಕಾರಿಗಳೊಂದಿಗೆ, ಅದರಲ್ಲೂ ಮಹಿಳಾ ಅಧಿಕಾರಿಗಳೊಂದಿಗೆ ಈ ರೀತಿಯ ವರ್ತನೆ ಸರಿಯಲ್ಲ ಎಂದು ಬಿಇಒ ತಿಳಿಸಿದರೂ ಪರಿಸ್ಥಿತಿ ತಿಳಿಯಾಗಲಿಲ್ಲ ಎನ್ನಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ ಸಿಬ್ಬಂದಿ
ಘಟನೆಯ ಬಳಿಕ ಶಿಕ್ಷಣ ಇಲಾಖೆಯ ಸಿಬ್ಬಂದಿ, ಶಿಕ್ಷಕರು ಹಾಗೂ ಗಂಗಾವತಿ ಮತ್ತು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಉಮಾದೇವಿ ಅವರ ಆರೋಗ್ಯ ವಿಚಾರಿಸಿದರು. ಮಾನಸಿಕ ಆಘಾತಕ್ಕೆ ಒಳಗಾಗಿದ್ದ ಅವರಿಗೆ ಧೈರ್ಯ ತುಂಬಿದರು. ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು ಕೂಡ ಘಟನೆಯ ಕುರಿತು ಬಿಇಒ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಸಂಘಟನೆಗಳ ಮೌನಕ್ಕೆ ಆಕ್ಷೇಪ
ಘಟನೆಗೆ ಸಂಬಂಧಿಸಿದಂತೆ ಶಿಕ್ಷಕರ ಸಂಘಗಳು ಮತ್ತು ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳು ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದಾರೆ. ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ ತಿಳಿಸಿದ್ದಾರೆ.
ಕಚೇರಿಯಲ್ಲಿ ನಡೆದ ಗಲಾಟೆಯ ಬಗ್ಗೆ ಮಾಹಿತಿ ಇಲ್ಲದ ಕಾರಣ ಈ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ಪ್ರೌಢಶಾಲಾ ನೌಕರರ ಸಂಘದ ಅಧ್ಯಕ್ಷ ನೀಲನಗೌಡ ಹೊಸಗೌಡರ್ ಹೇಳಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೀರಪ್ಪ ಕುರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಕರೆ ಸ್ವೀಕರಿಸಲಿಲ್ಲ ಎಂದು ತಿಳಿದುಬಂದಿದೆ.
ಸಂಘಟನೆಗಳ ಚುನಾವಣೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನೌಕರರ ಸಂಘಟನೆಗಳು, ಮಹಿಳಾ ಅಧಿಕಾರಿಯೊಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಗೆ ಸಂಬಂಧಿಸಿದಂತೆ ಮೌನ ವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ದೂರು ಬಂದರೆ ಕ್ರಮ: ಪೊಲೀಸರು
ಘಟನೆಗೆ ಸಂಬಂಧಿಸಿದಂತೆ ಬಿಇಒ ಅವರಿಂದ ದೂರು ಬಂದ ತಕ್ಷಣ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕುಷ್ಟಗಿ ಪೊಲೀಸ್ ಠಾಣೆಯ ಪಿಎಸ್ಐ ಹನುಮಂತಪ್ಪ ತಳವಾರ ತಿಳಿಸಿದ್ದಾರೆ.
ವರದಿ: ಶಿವು. ಪಿ.ಆರ್.






