ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ತಾಯಿ-ಮಗನ ಪವಿತ್ರ ಬಾಂಧವ್ಯಕ್ಕೆ ಕಳಂಕ ತರುವಂತಹ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಸವತಿ ಮಗನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು, ಆತ ಸಂಬಂಧ ಕಡಿದು ಬೇರೆ ಮದುವೆಯಾಗಲು ಮುಂದಾದ ಹಿನ್ನೆಲೆಯಲ್ಲಿ ₹6 ಲಕ್ಷ ಸುಪಾರಿ ನೀಡಿ ಕೊಲೆ ಮಾಡಿಸಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಮೃತನನ್ನು ನಿರ್ಮಲ್ ನಗರದ ಆಟೋ ಚಾಲಕ ಅಸ್ಲಾಂ ಖಾನ್ (28) ಎಂದು ಗುರುತಿಸಲಾಗಿದೆ. ಸುಮಾರು 17 ವರ್ಷಗಳ ಹಿಂದೆ ಅಸ್ಲಾಂನ ತಂದೆ ಅನ್ವರಿ ಬೇಗಂ (41) ಅವರನ್ನು ಎರಡನೇ ವಿವಾಹವಾಗಿದ್ದರು. ಒಂದೇ ಮನೆಯಲ್ಲಿದ್ದ ಸಂದರ್ಭದಲ್ಲಿ ಅಸ್ಲಾಂ ಹಾಗೂ ಅನ್ವರಿ ಬೇಗಂ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಅಸ್ಲಾಂ ಈ ಸಂಬಂಧವನ್ನು ಸಂಪೂರ್ಣವಾಗಿ ಕೊನೆಗೊಳಿಸಿ ಬೇರೆ ಮದುವೆಯಾಗಲು ನಿರ್ಧರಿಸಿದ್ದ. ಇದರಿಂದ ಆಕ್ರೋಶಗೊಂಡ ಅನ್ವರಿ ಬೇಗಂ, ಮದುವೆಯಾಗದಂತೆ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಈ ವಿಷಯವನ್ನು ಅಸ್ಲಾಂ ತನ್ನ ಚಿಕ್ಕಪ್ಪನಿಗೆ ತಿಳಿಸಿದ ಬಳಿಕ ಕುಟುಂಬದಲ್ಲಿ ಕಲಹ ಉಂಟಾಗಿ, ಆತ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದ.
ಅಸ್ಲಾಂ ತನಗೆ ಶಾಶ್ವತವಾಗಿ ದೂರವಾಗುತ್ತಿದ್ದಾನೆ ಎಂಬ ಸೇಡಿನಿಂದ ಅನ್ವರಿ ಬೇಗಂ ಕೊಲೆ ಸಂಚು ರೂಪಿಸಿದ್ದಳು. ಮಹಾರಾಷ್ಟ್ರ ಮೂಲದ ಸುಪಾರಿ ಹಂತಕ ಮುಖೀದ್ ಎಂಬಾತನೊಂದಿಗೆ ₹6 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡು ₹50,000 ಮುಂಗಡ ಹಣ ನೀಡಿದ್ದಳು. ತನ್ನ ಸಹೋದರ ಶೇಖ್ ಮಹಮ್ಮದ್ನನ್ನೂ ಸಂಚಿನಲ್ಲಿ ಭಾಗಿಯಾಗುವಂತೆ ಮಾಡಿ, ಅಸ್ಲಾಂನ ಫೋಟೋ, ಆಟೋ ಸಂಖ್ಯೆ ಹಾಗೂ ದಿನನಿತ್ಯದ ಚಲನವಲನದ ಮಾಹಿತಿಯನ್ನು ಹಂತಕರಿಗೆ ತಲುಪಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 15ರಂದು ಬೆಳಿಗ್ಗೆ ವೈಎಸ್ಆರ್ ಕಾಲೋನಿ ಬಳಿ ಆಟೋದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಅಸ್ಲಾಂನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಬಲವಂತವಾಗಿ ಕೆಳಗಿಳಿಸಿದರು. ಬಳಿಕ ಕತ್ತಿಯಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾದರು. ಗಂಭೀರವಾಗಿ ಗಾಯಗೊಂಡಿದ್ದ ಅಸ್ಲಾಂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟನು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಿರ್ಮಲ್ ಜಿಲ್ಲಾ ಎಸ್ಪಿ ಜಾನಕಿ ಶರ್ಮಿಳಾ ಅವರ ನೇತೃತ್ವದಲ್ಲಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ತನಿಖೆ ನಡೆಸಲಾಯಿತು. ವಿಚಾರಣೆ ವೇಳೆ ಪ್ರಮುಖ ಆರೋಪಿ ಅನ್ವರಿ ಬೇಗಂ ಕೊಲೆ ಸಂಚಿನ ಬಗ್ಗೆ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಅನ್ವರಿ ಬೇಗಂ, ಮುಖೀದ್, ಅಫ್ರೋಜ್, ಸಾಯಿನಾಥ್ ಪವಾರ್, ಶೇಖ್ ಸಾಹಿದ್ ಹಾಗೂ ಶೇಖ್ ಮಹಮ್ಮದ್ ಸೇರಿ ಒಟ್ಟು ಆರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
