ಅತ್ತೆಯೊಂದಿಗಿನ ಅಕ್ರಮ ಸಂಬಂಧ ಮುಂದುವರಿಸಲು ಮಗಳನ್ನೇ ವಿವಾಹವಾಗಿದ್ದ ಯುವಕ, ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಯನ್ನು ಕೊಲೆ ಮಾಡಿ ಮನೆಯ ಬೆಡ್ರೂಮ್ನಲ್ಲೇ ಶವವನ್ನು ಹೂತು ಮುಚ್ಚಿಟ್ಟಿದ್ದಾನೆ ಎನ್ನಲಾದ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಶಂಷೇರ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೊಲೆಯಾದ ಯುವತಿಯನ್ನು ಮೋಹಿದಾನ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಶಂಷೇರ್ಗೆ ಮೋಹಿದಾನ್ ಅವರ ತಾಯಿಯೊಂದಿಗೆ ಅನೈತಿಕ ಸಂಬಂಧವಿತ್ತು. ಈ ಸಂಬಂಧ ಮುಂದುವರಿಯಲು ಶಂಷೇರ್ ಕುಟುಂಬದೊಂದಿಗೆ ಸಂಪರ್ಕದಲ್ಲೇ ಇರಬೇಕೆಂದುಕೊಂಡಿದ್ದ ಮಹಿಳೆ, ತನ್ನ ಮಗಳನ್ನೇ ಆತನಿಗೆ ವಿವಾಹ ಮಾಡಿಕೊಟ್ಟಿದ್ದಾಳೆ ಎನ್ನಲಾಗಿದೆ. ಕಳೆದ ಜೂನ್ ತಿಂಗಳಲ್ಲಿ ಇಬ್ಬರ ಮದುವೆ ನಡೆದಿದ್ದು, ಮದುವೆಯಾದ ಕೆಲವೇ ವಾರಗಳಲ್ಲಿ ದಂಪತಿ ನಡುವೆ ಅನುಮಾನ ಮತ್ತು ಕಲಹಗಳು ಆರಂಭವಾಗಿದ್ದವು.
ಶಂಷೇರ್ಗೆ ತನ್ನ ಪತ್ನಿ ಬೇರೆ ವ್ಯಕ್ತಿಯೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಳೆ ಎಂಬ ಅನುಮಾನ ಕಾಡತೊಡಗಿತ್ತು. ಇದೇ ವಿಚಾರವಾಗಿ ಪದೇಪದೇ ಜಗಳ ನಡೆದಿದ್ದು, ಜುಲೈ 11ರಂದು ಕೋಪದ ಭರದಲ್ಲಿ ಚಾಕುವಿನಿಂದ ಇರಿದು ಮೋಹಿದಾನ್ ಅವರನ್ನು ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸಲು ಆರೋಪಿ ಮನೆಯ ಬೆಡ್ರೂಮ್ನಲ್ಲಿ ಮಂಚದ ಕೆಳಗೆ ಸುಮಾರು ಆರು ಅಡಿ ಆಳದ ಗುಂಡಿ ತೋಡಿ ಶವವನ್ನು ಹೂತು, ಮೇಲ್ಭಾಗಕ್ಕೆ ಸಿಮೆಂಟ್ ಹಾಕಿ ಹೊಸದಾಗಿ ಫ್ಲೋರಿಂಗ್ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಯಾರಿಗೂ ಅನುಮಾನ ಬಾರದಂತೆ ಸಹಜವಾಗಿ ವರ್ತಿಸುತ್ತಿದ್ದ ಆತ, ಜುಲೈ 13ರಂದು ಪತ್ನಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನಾಟಕವಾಡಿದ್ದಾನೆ.
ಮಿಸ್ಸಿಂಗ್ ಪ್ರಕರಣದ ತನಿಖೆ ವೇಳೆ ಪೊಲೀಸರು ಆರೋಪಿಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಬೆಡ್ರೂಮ್ನ ನೆಲದಲ್ಲಿ ಹೊಸದಾಗಿ ಮಾಡಲಾಗಿದ್ದ ಫ್ಲೋರಿಂಗ್ ಗಮನ ಸೆಳೆದಿದೆ. ಅನುಮಾನಗೊಂಡ ಪೊಲೀಸರು ಆ ಸ್ಥಳವನ್ನು ಅಗೆದು ಪರಿಶೀಲಿಸಿದಾಗ, ಗುಂಡಿಯೊಳಗೆ ಕೊಳೆತ ಸ್ಥಿತಿಯಲ್ಲಿದ್ದ ಮೋಹಿದಾನ್ ಅವರ ಶವ ಪತ್ತೆಯಾಗಿದೆ.
ಶವ ಪತ್ತೆಯಾದ ಬಳಿಕ ಪೊಲೀಸರು ಶಂಷೇರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ಗೆ ಒಪ್ಪಿಸಿದ್ದು, ಪ್ರಕರಣದ ಎಲ್ಲಾ ಆಯಾಮಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
