ಹರಿಯಾಣದ ರೇವಾರಿ ಜಿಲ್ಲೆಯಲ್ಲಿ ನಡೆದ ಭೀಕರ ಕೊಲೆ ಪ್ರಕರಣವೊಂದು 23 ದಿನಗಳ ಬಳಿಕ ಬಯಲಾಗಿದ್ದು, ಆರಂಭದಲ್ಲಿ ಆತ್ಮಹತ್ಯೆ ಅಥವಾ ಅಪಘಾತವೆಂದು ಭಾವಿಸಲಾಗಿದ್ದ ಯುವಕನ ಸಾವು, ಪತ್ನಿ ಮತ್ತು ಆಕೆಯ ಪ್ರೇಮಿಯ ಸಂಚು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೃತ ಯುವಕನನ್ನು 21 ವರ್ಷದ ಮೋನು ಕುಮಾರ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೋನು ಜೂನ್ 8ರಂದು ನಾಪತ್ತೆಯಾಗಿದ್ದ. ಈ ಕುರಿತು ಕುಟುಂಬಸ್ಥರು ಕಸೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಜೂನ್ 10ರಂದು ಅಸಲ್ವಾಸ್ ಗ್ರಾಮದ ಸಮೀಪದ ಕಾಲುವೆಯಲ್ಲಿ ಆತನ ಶವ ಪತ್ತೆಯಾಗಿತ್ತು.

ಘಟನಾ ಸ್ಥಳದಲ್ಲಿ ಮೋನು ಬಳಸುತ್ತಿದ್ದ ಸ್ಕೂಟರ್ ಕಾಲುವೆ ಪಕ್ಕದಲ್ಲೇ ಸರಿಯಾಗಿ ನಿಲ್ಲಿಸಲಾಗಿತ್ತು. ಮೃತದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳ ಗುರುತು ಕಾಣಿಸದ ಕಾರಣ, ಇದು ಆತ್ಮಹತ್ಯೆ ಅಥವಾ ಆಕಸ್ಮಿಕವಾಗಿ ಕಾಲುವೆಗೆ ಬಿದ್ದು ಸಂಭವಿಸಿದ ಸಾವು ಎಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು.

ಆದರೆ ತನಿಖೆ ಮುಂದುವರಿದಂತೆ ಮೋನು ಪತ್ನಿ ತನ್ನು ವರ್ತನೆ ಮತ್ತು ಹೇಳಿಕೆಗಳ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ವಿಚಾರಣೆಯನ್ನು ತೀವ್ರಗೊಳಿಸಿದಾಗ, ತನ್ನು ತನ್ನ ಪ್ರೇಮಿ ಸೋನು ಸಿಂಗ್ ಜೊತೆಗೂಡಿ ಗಂಡನ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮೋನು ಮತ್ತು ತನ್ನು ವಿವಾಹವಾಗಿ ಮೂರು ವರ್ಷಗಳಾಗಿದ್ದರೂ, ದಾಂಪತ್ಯ ಜೀವನದಲ್ಲಿ ಅಸಮಾಧಾನ ಇತ್ತು. ಈ ನಡುವೆ ತನ್ನುಗೆ ಮುಂಡನವಾಸ್ ಗ್ರಾಮದ ಸೋನು ಸಿಂಗ್ ಜೊತೆ ಅಕ್ರಮ ಸಂಬಂಧ ಬೆಳೆದಿತ್ತು. ಇತ್ತೀಚೆಗೆ ಈ ವಿಷಯ ಮೋನುಗೆ ತಿಳಿದಿದ್ದರಿಂದ ದಂಪತಿಗಳ ನಡುವೆ ಜಗಳ ಹೆಚ್ಚಾಗಿತ್ತು.

ತಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಮೋನುವನ್ನು ಹತ್ಯೆ ಮಾಡಲು ತನ್ನು ಮತ್ತು ಸೋನು ಸಂಚು ರೂಪಿಸಿದ್ದರು. ಯೋಜನೆಯಂತೆ ತನ್ನು, ಮೋನುವನ್ನು ಕಸೋಲಾ ಭಾಗದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಅಲ್ಲಿ ಮೊದಲೇ ಕಾಯುತ್ತಿದ್ದ ಸೋನು ಮತ್ತು ಆತನ ಸಹಚರರು ಮೋನು ಮೇಲೆ ದಾಳಿ ನಡೆಸಿದ್ದಾರೆ.

ಮೋನುಗೆ ಗಾಯಗಳಾಗದಂತೆ ಮೂಗು ಮತ್ತು ಬಾಯಿಯನ್ನು ಒತ್ತಿಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಪ್ರಕರಣವನ್ನು ಅಪಘಾತವೆಂದು ತೋರಿಸಲು ಶವವನ್ನು ಕಾಲುವೆಗೆ ಎಸೆದು, ಸ್ಕೂಟರ್ ಅನ್ನು ಪಕ್ಕದಲ್ಲೇ ನಿಲ್ಲಿಸಿ ಆರೋಪಿಗಳು ಪರಾರಿಯಾಗಿದ್ದರು.

ಪ್ರಕರಣ ಸಂಬಂಧ ಪೊಲೀಸರು ತನ್ನು ಮತ್ತು ಸೋನುನ ಸಹಚರ ಹರಿಯೋಮ್ ಅವರನ್ನು ಬಂಧಿಸಿದ್ದು, ನ್ಯಾಯಾಲಯ ಇಬ್ಬರನ್ನೂ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಮುಖ ಆರೋಪಿ ಸೋನು ಸಿಂಗ್ ಸೇರಿದಂತೆ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ಘಟನೆ ಸ್ಥಳೀಯರಲ್ಲಿ ಭಾರೀ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿದೆ.

Related News

error: Content is protected !!