ತಮಿಳುನಾಡಿನ ಹೊಸೂರಿನಲ್ಲಿ ಒಂದೇ ಬೈಕ್‌ನಲ್ಲಿ ಮೂವರು ಶಾಲಾ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಸಂದರ್ಭ ಲಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಅವರು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಮದನ್ (14), ಆರ್ಯನ್ ಸಿಂಗ್ (13) ಹಾಗೂ ಹರೀಶ್ (14) ಎನ್ನುವವರೇ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು.

ಘಟನೆ ಹೇಗೆ ನಡೆದಿದೆ?
ಮದನ್ ಎಂಬ ಹುಡುಗನು ಶಾಲೆಗೆ ಹಾಜರಾಗದಿದ್ದಾಗ, ಸಂಜೆ ವೇಳೆ ತನ್ನ ತಂದೆಯ ಮೋಟಾರ್ ಸೈಕಲ್‌ನ್ನು ತೆಗೆದುಕೊಂಡು ಶಾಲೆಯ ಬಳಿ ಹೋಗಿದ್ದಾನೆ. ಅಲ್ಲಿ ತನ್ನ ಸ್ನೇಹಿತರಾದ ಆರ್ಯನ್ ಹಾಗೂ ಹರೀಶ್‌ರನ್ನು ಕರೆದುಕೊಂಡುಂತಿವಾಡಿಗೆ ಹೋಗಿದ್ದನು. ವಾಪಸ್ ಮಧಗಿರಿ ಜಂಟಿ ರಸ್ತೆಯ ಮೂಲಕ ಮೂವರು ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದಾಗ, ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಹಿಂಭಾಗದಿಂದ ಬೈಕ್ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಮೂವರು ಮಕ್ಕಳೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಈಪೈಕಿ ಆರ್ಯನ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಉಳಿದ ಇಬ್ಬರೂ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಜೀವಬಿಟ್ಟಿದ್ದಾರೆ. ಸ್ಥಳಕ್ಕೆ ತಕ್ಷಣವೇ ಪೊಲೀಸರು, ವೈದ್ಯರು ಹಾಗೂ ಸಾರ್ವಜನಿಕರು ಧಾವಿಸಿದರು.

ಪೊಲೀಸರು ಸ್ಥಳಕ್ಕೆ ಧಾವನೆ
ಘಟನೆಯ ವರದಿ ಪಡೆದ ಕೃಷ್ಣಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಂಗದುರೈ, ಹೆಚ್ಚುವರಿ ಎಸ್ಪಿ ಶಂಕರ್ ಹಾಗೂ ಹೊಸೂರು ಉಪವಿಭಾಗದ ಎಸ್ಪಿ ಅನಿಲ್ ಅಕ್ಷಯ್ ವಾಘರೆ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮರಣೋತ್ತರ ಪರೀಕ್ಷೆಯ ನಂತರ ದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ಪೋಷಕರ ಆಕ್ರಂದನ
ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ಪೋಷಕರ ನೋವಿನ ಕಿರುಚು ಆಸ್ಪತ್ರೆ ಬಳಿ ಮುಗಿಲು ಮುಟ್ಟಿದಂತಾಯಿತು. ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

 

error: Content is protected !!