ಬೆಂಗಳೂರು ನಗರದಲ್ಲಿ ರಸ್ತೆ ಬದಿಯ ಅಪಾಯಕಾರಿ ಮರಗಳ ನಿರ್ವಹಣೆಯ ಕೊರತೆಯಿಂದ ಮತ್ತೊಂದು ಗಂಭೀರ ಅವಘಡ ಸಂಭವಿಸಿದೆ. ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಸವಾರನ ಮೇಲೆ ಬೃಹತ್ ಮರದ ಕೊಂಬೆ ಬಿದ್ದ ಪರಿಣಾಮ, ಸವಾರ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದಾರೆ.
ಬುಧವಾರ ಸಂಜೆ ನಡೆದ ಈ ದುರ್ಘಟನೆಯಲ್ಲಿ ಗಾಯಗೊಂಡವರು 52 ವರ್ಷದ ಸತೀಶ್. ಅವರು ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಕಲೆಕ್ಷನ್ ಕೆಲಸ ಮಾಡುತ್ತಿದ್ದು, ಎಂದಿನಂತೆ ದ್ವಿಚಕ್ರ ವಾಹನದಲ್ಲಿ ಕೆಲಸದ ನಿಮಿತ್ತ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಮಾಹಿತಿಯ ಪ್ರಕಾರ, ಜೋರಾಗಿ ಬೀಸಿದ ಗಾಳಿಗೆ ರಸ್ತೆ ಬದಿಯಲ್ಲಿದ್ದ ಒಣಗಿದ ಮರದ ಕೊಂಬೆಯೊಂದು ಮುರಿದು ನೇರವಾಗಿ ಸತೀಶ್ ಅವರ ತಲೆಯ ಮೇಲೆ ಬಿದ್ದಿದೆ. ಕೊಂಬೆ ಅಪ್ಪಳಿಸಿದ ತಕ್ಷಣವೇ ಅವರು ಬೈಕ್ ಸಮೇತ ರಸ್ತೆಗೆ ಕುಸಿದು ಬಿದ್ದಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ.
ಸ್ಥಳೀಯರು ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ. ವೈದ್ಯರು ತಲೆಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದು, ಸತೀಶ್ ಅವರು ಸದ್ಯ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ 48 ಗಂಟೆಗಳು ಅತ್ಯಂತ ಮಹತ್ವದ್ದಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಜಿಬಿಎ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಬದಿಯ ಮರಗಳು ಒಣಗಿ ಅಪಾಯಕಾರಿಯಾಗಿ ನಿಂತಿದ್ದರೂ, ಹಲವು ಬಾರಿ ದೂರು ನೀಡಿದ ಬಳಿಕವೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
