ಕಸ್ಟಮ್ಸ್ ಮಹಿಳಾ ಅಧಿಕಾರಿಗೆ ಸಂಬಂಧಿಸಿದ ಬ್ಲ್ಯಾಕ್ಮೇಲ್ ಪ್ರಕರಣದಲ್ಲಿ ಬಂಧಿತನಾದ ಕೃಪಾಲನಿ ಕುರಿತು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ವಿಚಾರಣೆ ವೇಳೆ, ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಹತ್ತಿರವಾಗಿದ್ದು, ದೈಹಿಕ ಸಂಪರ್ಕ ಬೆಳೆಸಿ ಸುಮಾರು 50 ಮಂದಿಗೆ ವಂಚನೆ ಹಾಗೂ ಬ್ಲ್ಯಾಕ್ಮೇಲ್ ನಡೆಸಿರುವುದು ಬೆಳಕಿಗೆ ಬಂದಿದೆ.
ಪುಲಕೇಶಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಸಂಗತಿಗಳು ಬಹಿರಂಗವಾಗಿವೆ. ವಿಶೇಷವಾಗಿ ಸರ್ಕಾರಿ ಮಹಿಳಾ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡಿದ್ದ ಕೃಪಾಲನಿ, ತಾನು ಉದ್ಯಮಿ ಎಂದು ಪರಿಚಯಿಸಿಕೊಂಡು ನಂಬಿಕೆ ಗಳಿಸುತ್ತಿದ್ದನು. ಕಸ್ಟಮ್ಸ್ ಹಾಗೂ ಜಿಎಸ್ಟಿ ಇಲಾಖೆಯ ಮಹಿಳಾ ಅಧಿಕಾರಿಗಳೇ ಈತನ ಮುಖ್ಯ ಟಾರ್ಗೆಟ್ ಆಗಿದ್ದರು.
ಮೊದಲು ಪರಿಚಯ ಮಾಡಿಕೊಂಡು ಲಂಚ್, ಡಿನ್ನರ್, ಪಾರ್ಟಿಗಳ ಮೂಲಕ ಆತ್ಮೀಯತೆ ಬೆಳೆಸಿಕೊಳ್ಳುತ್ತಿದ್ದನು. ನಂತರ ಪ್ರೀತಿ ಮತ್ತು ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸುತ್ತಿದ್ದನು. ಬಳಿಕ ಆ ಕ್ಷಣಗಳನ್ನು ಗುಪ್ತವಾಗಿ ವೀಡಿಯೋ ಮಾಡಿಕೊಳ್ಳುತ್ತಿದ್ದ ಆತ, ಅದನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂಬ ಸಂಗತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಪ್ರಕರಣದ ಗಂಭೀರತೆಯನ್ನು ಗಮನಿಸಿದ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
